

ಬೆಂಗಳೂರು ಗ್ರಾಮಾಂತರ: ಕೇಂದ್ರ ಹಾಗೂ ರಾಜ್ಯದ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಮಾತನಾಡಿ, ಕಾಂಗ್ರೆಸ್, ದೇಶದಲ್ಲಿ ಜಾತಿ ಒಡೆದು ಅಧಿಕಾರ ನಡೆಸಿ ದೇಶವನ್ನು ಲೂಟಿ ಮಾಡಿದರೆ, ಬಿಜೆಪಿ ಧರ್ಮ ಒಡೆದು ಅಧಿಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಪರಿಪೂರ್ಣವಾಗಿ ಜಾರಿಗೆ ಬಂದಿಲ್ಲ. ದೇಶದಲ್ಲಿ ಶೇ.97 ಮಂದಿ ಬಡವರಿದ್ದಾರೆ. ಭಾರತ ಸಂಪದ್ಬರಿತ ರಾಷ್ಟ್ರವಾಗಿದ್ದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ದಿಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ಜತೆಗೆ ರೈತ ವಿರೋಧಿ ಕಾಯ್ದೆಗಳು, ದಲಿತ ವಿರೋಧಿ ನೀತಿಗಳ ಮೂಲಕ ಸರ್ಕಾರಗಳು ದಮನ ನೀತಿ ಅನುಸರಿಸುತ್ತಿವೆ ಎಂದು ದೂರಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕೊಟ್ಟಿದ್ದಾರೆ. ಆದರೆ ಸಂವಿಧಾನ ಜಾರಿಗೆ ಬಂದು 70 ವರ್ಷಗಳಾದರೂ ಏನೂ ಬದಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ನಮ್ಮ ವ್ಯಾಪ್ತಿಯಲ್ಲಿ ಬಗೆಹರಿಯುವಂತಹ ಸಮಸ್ಯೆಗಳಿದ್ದರೆ ಕೂಡಲೇ ಕ್ರಮಕೈಗೊಳ್ಳಲಾಗುವುದು. ಇನ್ನಿತರ ಬೇಡಿಕೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲಾ ಸಂಯೋಜಕ ತಿಮ್ಮರಾಯಪ್ಪ, ಜಿಲ್ಲಾ ಅಧ್ಯಕ್ಷ ಮುನಿಕೃಷ್ಣ , ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆ ರಮಾದೇವಿ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ದೇವಪ್ಪ, ಜಿಲ್ಲಾ ಉಪಾಧ್ಯಕ್ಷ ಕಟಿಗೇನಹಳ್ಳಿ ಅಂಜಿನಪ್ಪ ಮತ್ತಿತರರು ಇದ್ದರು.