

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಶುಕ್ರವಾರ ಇಡೀ ದಿನ ಮಂಜಿನ ವಾತಾವರಣ ಕಂಡುಬಂದಿದ್ದು, ಇದು ಇಲ್ಲಿಂದ ಸಾಗುವ ಪ್ರಯಾಣಿಕರಿಗೆ ಹೆಚ್ಚಿನ ಮುದ ನೀಡಿತು.
ಘಾಟಿ ಪರಿಸರದ 25 ಕಿ.ಮೀ. ವ್ಯಾಪ್ತಿಯಲ್ಲಿ ಮಂಜು ಮುಸುಕಿದ ವಾತಾವರಣವಿದ್ದ ಕಾರಣ ವಾಹನಗಳು ಹೆಡ್‌ಲೈಟ್ ಬೆಳಗಿಸಿ ಚಲಾಯಿಸುವುದು ಅನಿವಾರ್ಯವಾಯಿತು. ಬೆಳಗ್ಗೆಯಿಂದಲೇ ಭಾರಿ ಮಂಜು ಕವಿದ ವಾತಾವರಣವಿದ್ದು ಸಮಯ ಕಳೆಯುತ್ತಿದ್ದಂತೆ ಇದು ಹೆಚ್ಚುತ್ತ ಹೋಗಿ ಸಂಜೆ ವೇಳೆ ರಸ್ತೆ ಕಾಣಿಸದಷ್ಟು ದಟ್ಟವಾಗಿ ಮುಸುಕಿತ್ತು. ಒಂದು ವಾರದಿಂದ ಘಾಟಿ ಪರಿಸರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಶುಕ್ರವಾರ ಕೂಡ ಆಗಾಗ ತುಂತುರು ಮಳೆಯಾಗಿದೆ. ಸೆಕೆಯ ವಾತಾವರಣವಿದ್ದ ಘಾಟಿ ಪ್ರದೇಶದಲ್ಲಿ ಈಗ ತಂಪಿನ ವಾತಾವರಣ ನಿರ್ಮಾಣವಾಗಿದೆ.
ಮಂಜು ಮುಸುಕಿದ ವಾತಾವರಣ, ತುಂತುರು ಮಳೆಯಲ್ಲಿ ಪ್ರಯಾಣಿಕರು ಪ್ರಯಾಣದ ಸಂತಸ ಅನುಭವಿಸಿದರು. ಘಾಟಿಯಲ್ಲಿ ಮಂಜು ಮುಸುಕಿದ್ದರಿಂದ ಇಲ್ಲಿನ ಕಲ್ಲು, ಬಂಡೆ, ಕಣಿವೆ ಪ್ರದೇಶಗಳು ಕೂಡ ಮಂಜಿನಿಂದ ಆವೃತವಾಗಿದ್ದವು. ಇಲ್ಲಿನ ಕೆಲವು ತೊರೆಗಳಲ್ಲೂ ನೀರ ಹರಿವು ಕೂಡ ಆರಂಭವಾಗಿದೆ. ಮಳೆಗಾಲ ಸಂದರ್ಭ ಘಾಟಿಯಲ್ಲಿ ಮಂಜಿನ ವಾತಾವರಣ ಸಾಮಾನ್ಯ. ಆದರೆ ದಿನವಿಡೀ ಈ ವಾತಾವರಣ ಮುಂದುವರಿಯುವುದು ತೀರ ಕಡಿಮೆ. ಮಂಜು ಮುಸುಕಿದ ವಾತಾವರಣದಿಂದ ಕೆಲವು ವಾಹನ ಸವಾರರು ಪರದಾಟ ನಡೆಸಿದರು. ರಸ್ತೆಯ ಎರಡೂ ಬದಿ ಕಾಣದಷ್ಟು ಮಂಜು ದಟ್ಟವಾಗಿ ಹಬ್ಬಿತ್ತು.
ಘಾಟಿ ಪರಿಸರದಲ್ಲಿ ಮಳೆಗಾಲದ ನಿರ್ವಹಣೆ ಕಾಮಗಾರಿ ಆರಂಭಿಸಲಾಗಿದೆ. ಘಾಟಿಯಲ್ಲಿ ಚರಂಡಿ ದುರಸ್ತಿ ಮೊದಲಾದ ಅಗತ್ಯ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ. ಘಾಟಿಯ ಸಂಪರ್ಕ ರಸ್ತೆ ಅಭಿವೃದ್ಧಿ ಹೊಂದುತ್ತಿದ್ದು ಇಲ್ಲಿ ಅಗೆದು ಹಾಕಲಾದ ಜಾಗಗಳಲ್ಲಿ ತಕ್ಷಣ ಡಾಂಬರು ಅಳವಡಿಸುವ ಕೆಲಸ ನಡೆಯಲಿದ್ದು ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು.- ಶಿವಪ್ರಸಾದ್ ಅಜಿಲಕಾರ್ಯನಿರ್ವಾಹಕ ಅಭಿಯಂತ, ರಾ.ಹೆ.ಇಲಾಖೆ, ಮಂಗಳೂರು