

ಮಂಗಳೂರು: ಕಳೆದ 3-4 ವಾರಗಳಿಂದ ಕರಾವಳಿಯಾಧ್ಯಂತ ಮಳೆಗೆ ಬ್ರೇಕ್ ಬಿದ್ದಿದೆ. ಮಳೆ ಕಡಿಲೆಯಾಗುತ್ತಿದ್ದಂತೆ ರಾತ್ರಿ ವೇಳೆ ಮಂಜು ಆವರಿಸಿಕೊಂಡಿದೆ. ಅಕಾಲಿಕ ಮಳೆಯ ಹೊಸ್ತಿಲಲ್ಲಿರುವ ಕರಾವಳಿಗೆ ಅತೀ ಬೇಗ ಮಂಜು ಸಹಿತ ಇಬ್ಬನಿಯ ಅನುಭವವಾಗಿದೆ.
3 ದಿನಗಳಿಂದ ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಸಹಿತ ಹಲವೆಡೆ ರಾತ್ರಿ ವೇಳೆ ಅತೀ ಹೆಚ್ಚು ಮಂಜು ಆವರಿಸಿತ್ತು. ಆರಂಭದಲ್ಲಿ ಹೊಗೆ ಇರಬಹುದೇನೋ ಎಂಬ ಭ್ರಮೆ ಆವರಿಸಿದ್ದರೂ, ನಿಧಾನವಾಗಿ ಚಳಿ ಆವರಿಸಿದ್ದರಿಂದ ಜನತೆಗೆ ಮಂಜು ಕವಿದ ಸ್ಪಷ್ಟ ಚಿತ್ರಣ ದೊರಕಿತು. ಈ ಮಧ್ಯೆ ಘಾಟಿ ಪ್ರದೇಶ ಶಿರಾಡಿ ಹಾಗೂ ಚಾರ್ಮಾಡಿ ಪ್ರದೇಶಗಳಲ್ಲಿ ತಗ್ಗು ಪ್ರದೇಶಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮಂಜು ಆವರಿಸಿಕೊಳ್ಳುತ್ತಿದೆ. ಈ ಚಿತ್ರಣವನ್ನು ಮಳೆ ಕ್ಷೀಣಿಸುವ ಮುನ್ಸೂಚನೆ ಎಂದ ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
*ರಾತ್ರಿಯಿಡಿ ಮಂಜು ಆವರಿಕೆ
ಹಗಲಿನಲ್ಲಿ ಜಾಸ್ತಿ ಬಿಸಿಯಾಗಿರದ ಉತ್ತಮ ವಾತಾವರಣ ವಿದ್ದರೂ, ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಸೆಕೆ ಅನುಭವವಾಗುತ್ತಿದೆ. ಗ್ರಾಮಾಂತರ ಭಾಗದಲ್ಲಂತೂ ಸಾಯಂಕಾಲದಿಂದಲೇ ತುಸು ಚಳಿಯ ಅನುಭವವಾಗುತ್ತಿದೆ. ಬೆಳಗ್ಗೆ ಸೂರ್ಯೋಧಯಕ್ಕೂ ಮುನ್ನ ಗಿಡ-ಮರಗಳ ಮೇಲೆ ಇಬ್ಬನಿ ಬಿಳುತ್ತಿರುವುದು ಸಹಜವಾಗುತ್ತಿದ್ದರೂ, ರಾತ್ರಿಯಿಡಿ ಮಂಜು ಆವರಿಸಿಕೊಳ್ಳುತ್ತಿದೆ. ಮಳೆ ಕ್ಷಣವಾದರೂ ಕರಾವಳಿಯ ಜೀವನದಿಗಳಲ್ಲಿ ನೀರಿನ ಮಟ್ಟ ಯಥಾಸ್ಥಿತಿಯಲ್ಲಿದೆ. ಲಭ್ಯ ಮಾಹಿತಿಯಂತೆ ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ ಸಂಗಮ ಸ್ಥಳದಲ್ಲಿ 25.40 ಮೀಟರ್, ಬಂಟ್ವಾಳದಲ್ಲಿ ನೇತ್ರಾವತಿ ನದಿ 3.0 ಮೀಟರ್ ಹಾಗೂ ಗುರುಪುರ ಫಲ್ಗುಣಿ ನದಿ 2.46 ಮೀಟರ್‌ನಲ್ಲಿ ಹರಿಯುತ್ತಿತ್ತು.
----------------
ನವರಾತ್ರಿ ದೀಪಾವಳಿಗೆ ಮತ್ತೆ ಮಳೆ ಸಾಧ್ಯತೆ
ಪ್ರಸ್ಥುತ ಚಳಿ ಆವರಿಸಿದ್ದರೂ ಇದು ದೀರ್ಘಾವಧಿಯ ಪ್ರಕ್ರೀಯೆಯಲ್ಲ, ಇದನ್ನು ಮಳೆ ಕ್ಷೀಣಿಸುವ ಮುನ್ಸೂಚನೆ ಎಂದು ಹೇಳಬಹುದು. ಮಳೆಗಾಲ ಕೊನೆಯಾಗುವ ಸಂದರ್ಭ ತುಸು ಚಳಿ, ಕೆಲವು ದಿನಗಳ ನಂತರ ಸುಡುಬಿಸಿಲು ಆವರಿಸುತ್ತದೆ. ಚಳಿಗಾಲ ಏನಿದ್ದರೂ ಡಿಸೆಂಬರ್‌ನಲ್ಲಿ ಮಾತ್ರ ಹೆಚ್ಚು ಅನುಭವವಾಗುವುದು. ಮುಂದಿನ 2 ವಾರ ನಂತರ ಅಥವಾ ನವರಾತ್ರಿ, ದೀಪಾವಳಿ ವೇಳೆ ಮಳೆ ಸಾಧ್ಯತೆ ಇದೆ ಎಂದು ಐಐಟಿ ಚೆನೈ ವಿಜ್ಞಾನಿ, ಹವಾಮಾನ ತಜ್ಞ ಡಾ.ಭೂಜರಾಜ್ ವಿಜಯವಾಣಿಗೆ ತಿಳಿಸಿದ್ದಾರೆ.
-----------------
ಕರಾವಳಿಯಲ್ಲಿ ಉತ್ತಮ ಮಳೆ
ಕಳೆದ ಜನವರಿಯಿಂದ ಸೆ.20ರ ವರೆಗೆ ದ.ಕ, ಉಡುಪಿಯನ್ನೊಳಗೊಂಡ ಕರಾವಳಿಯಲ್ಲಿ 3948ಮಿ.ಮಿ ಸರಾಸರಿ ಮಳೆಯಾಗುವಲ್ಲಿ 3449 ಮಿ.ಮಿ ಮಳೆಯಾಗಿದ್ದು, ಒಟ್ಟಾರೆಯಾಗಿ ಇದು ಕರಾವಳಿಗೆ ಉತ್ತಮ ವರ್ಷಾಧಾರೆ. ಈಬಾರಿ (ಜನರಿಯಿಂದ ಸೆ.20ರ ವರೆಗೆ) ಬೆಳ್ತಂಗಡಿ 3820.8 ಮಿ.ಮಿ, ಬಂಟ್ವಾಳ 3362.0 ಮಿ.ಮಿ, ಮಂಗಳೂರು 3173.1 ಮಿ.ಮಿ, ಪುತ್ತೂರು 3499.0 ಮಿ.ಮಿ, ಸುಳ್ಯ 3041.6 ಮಿ.ಮಿ, ಮೂಡುಬಿದರೆ 3492.5 ಮಿ.ಮಿ, ಕಡಬ 3517.3 ಮಿ.ಮಿ, ಮೂಲ್ಕಿ 3308.9 ಮಿ.ಮಿ, ಉಳ್ಳಾಲ 3173.4 ಮಿ.ಮಿ ಮಳೆಯಾಗಿದೆ. ಮುಂಗಾರು ಕೊನೆಗೊಳ್ಳಲು ಇನ್ನೂ ವಾರ ಇದೆ. ಈಮಧ್ಯೆ ಕರಾವಳಿಯಾಧ್ಯಂತ ಹಗಲು ಬಿಸಿಲು, ರಾತ್ರಿ ಚಳಿಯ ಅನುಭವವಾಗುತ್ತಿದ್ದು, ಮಳೆ ಕ್ಷೀಣಗೊಂಡಿದೆ.
---------------------
ಪ್ರಸ್ತುತ ಕರಾವಳಿ ಭಾಗದ ಹವಾಮಾನ, ವಾಯುಗುಣವನ್ನು ತಕ್ಷಣಕ್ಕೆ ನಿರೂಪಿಸಲು ಸಾಧ್ಯವಿಲ್ಲ. ಭೌಗೋಳಿಕ ರಚನೆಗಳು ಬದಲಾಗಿದ್ದರಿಂದ ಕರಾವಳಿಯಲ್ಲಿ ಕ್ಷಣ ಕ್ಷಣಕ್ಕೂ ಹವಾಮಾನ, ವಾಯುಗುಣ ಬದಲಾಗುತ್ತಿರುತ್ತದೆ. ಪ್ರಸ್ತುತ ಕರಾವಳಿಯಾದ್ಯಂತ ಮಂಜು ಆವರಿಸಿದ್ದುದರಿಂದ ಇದು ಚಳಿಗಾಲದ ಆರಂಭದ ಸೂಚನೆ ಎಂದೇ ಹೇಳಬಹುದು.
ಡಾ. ಶಿಕುಮಾರ್, ಹವಾಮಾನ ತಜ್ಞ ಹಾಗೂ ಹವಾಮಾನ ಇಲಾಖೆಯ ನಿವೃತ್ತ ಅಧಿಕಾರಿ