ಬೈಸಿಕೊಳ್ಳೋದರ ಬಗ್ಗೆ ಅಲ್ಲ, ಗುರಿ ಸಾಧನೆಗೆ ಮಾಡಬೇಕಾದ ಕೆಲಸದ ಕಡೆ ಗಮನಕೊಡಿ: ಪ್ರದೀಪ್ ಈಶ್ವರ್ ಸಲಹೆ

2.jpg
Published on

ಚಿಕ್ಕಬಳ್ಳಾಪುರ: ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುನ್ನಡೆದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ತಿಳಿಸಿದರು.
ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಶುಕ್ರವಾರ ಕೈಗೊಂಡಿದ್ದ ನಮ್ಮ ಊರಿಗೆ ನಮ್ಮ ಶಾಸಕರು ಮತ್ತು ಜನರೊಂದಿಗೆ ಸಂವಾದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಎದುರಾಳಿಗಳು ಸದಾ ಏನೇ ಮಾಡಿದರೂ ಟೀಕಿಸುತ್ತಿರುತ್ತಾರೆ. ಇದರ ಬಗ್ಗೆ ಯೋಚಿಸಿಕೊಂಡು ಕುಳಿತುಕೊಳ್ಳುವುದರಿಂದ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ತೆಗಳುವವರ ಮಾತಿಗೆ ಕಿವುಡರಾಗಬೇಕು. ಕೇವಲ ಗುರಿಯ ಕಡೆಗೆ ಗಮನಹರಿಸಿ, ಪ್ರಾಮಾಣಿಕ ಶ್ರಮದ ಮೂಲಕ ಸಾಧನೆ ತೋರಬೇಕು. ಇದುವೇ ಉದ್ಧಾರ ಮಾರ್ಗ ಎಂದರು.
ಕ್ಷೇತ್ರದಲ್ಲಿನ ಪ್ರತಿ ವಾರ್ಡ್ ಹಾಗೂ ಗ್ರಾಮಗಳಿಗೆ ತೆರಳಿ ನೇರವಾಗಿ ಜನರ ಅಹವಾಲುಗಳನ್ನು ಆಲಿಸಲಾಗುತ್ತಿದೆ. ಹಾಗೆಯೇ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವುದರ ಜತೆಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಅಭಿವೃದ್ಧಿ ಕೊಡುಗೆ ಹಾಗೂ ಸಾಧನೆಗಳ ಬಗ್ಗೆ ಈಗಾಗಲೇ ರಿಪೋರ್ಟ್ ಕಾರ್ಡ್ ಬಿಡುಗಡೆಗೊಳಿಸಲಾಗಿದೆ. ಅಂಕಿ ಅಂಶಗಳ ದಾಖಲೆಯನ್ನು ಮುಂದಿಡಲಾಗಿದೆ. ಅಮ್ಮ ಆಂಬ್ಯುಲೆನ್ಸ್ ನಿಂದ ಅನೇಕ ರೋಗಿಗಳ ಜೀವ ಉಳಿದಿದೆ, ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ವಿತರಣೆಯ ವಿದ್ಯಾರ್ಥಿ ವೇತನ, ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ವಿಶೇಷ ಸವಲತ್ತುಗಳು ದೊರಕಿಸಿಕೊಟ್ಟಿರುವುದು ಎಲ್ಲರಿಗೂ ತಿಳಿದಿದೆ. ಮುಂಬರುವ ದಿನಗಳಲ್ಲಿ ಜನರೇ ಎಲ್ಲವನ್ನೂ ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಇಒ ಎನ್.ಆರ್.ಮಂಜುನಾಥ್, ಮುಖಂಡರಾದ ಮೋಹನ್, ಹರೀಶ್ ಮತ್ತಿತರರು ಇದ್ದರು.

ಬಾಕ್ಸ್
ಗ್ಯಾರಂಟಿ ಹಣ ಬರುತ್ತಾ?
ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಪ್ರತಿ ತಿಂಗಳು 2 ಸಾವಿರ ರೂ ಬರುತ್ತಿದೆಯೇ? ಎಂದು ಶಾಸಕರು ಪ್ರಶ್ನಿಸಿದಾಗ, ಕೆಲ ತಿಂಗಳು ಸಿಕ್ಕಿದೆ. ಇನ್ನು ಬಾಕಿ ಇದೆ ಎಂಬುದಾಗಿ ಕೆಲ ಲಾನುಭವಿಗಳು ತಿಳಿಸಿದರು. ಹಣದ ನೆರವಿಗೆ ಧನ್ಯವಾದ ಹೇಳಬೇಕಲ್ಲ ಅಂತಾ ಹೇಳಿ ಅಲ್ಲಿಂದ ಶಾಸಕರು ಹೊರಟರು.

ಬಾಕ್ಸ್
ಸ್ಥಳಿಯರ ಅಹವಾಲು
ಗ್ರಾಮದಲ್ಲಿ ಒಣಗಿದ ಮರ ರಸ್ತೆಗೆ ಅಡ್ಡಲಾಗಿ ಇರುವ, ಯಾವುದೇ ಕ್ಷಣದಲ್ಲಿ ಬೀಳುವ ಆತಂಕದ ಬಗ್ಗೆ ಮಹಿಳೆಯರು ಆತಂಕ ವ್ಯಕ್ತಪಡಿಸಿದರು. ಸಾರಿಗೆ ಸಂಸ್ಥೆಯ ಬಸ್ ಬಾರದ ಹಿನ್ನೆಲೆಯಲ್ಲಿ ಕಿ.ಮೀ.ಗಟ್ಟಲೇ ಪ್ರತಿನಿತ್ಯ ಓಡಾಬೇಕಾಗಿದೆ. ಕುಡಿಯುವ ನೀರಿನ ಶುದ್ದೀಕರಣ ಟಕ ಇಲ್ಲದಿರುವುದರಿಂದ ಅಶುದ್ದವಾದ ನೀರನ್ನು ಸೇವಿಸುವಂತಾಗಿದೆ. ಗ್ರಾಮದಲ್ಲಿನ ಹದಗೆಟ್ಟ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸ್ಥಳಿಯರು ಸಮಸ್ಯೆಗಳನ್ನು ಹೇಳಿಕೊಂಡರು. 15 ದಿನಗಳಲ್ಲಿ ನೀರಿನ ಟಕ ಸ್ಥಾಪನೆ, ಬಸ್ ಸೌಕರ್ಯ ಮತ್ತು ರಸ್ತೆ ಕಾಮಗಾರಿ ಚಾಲನೆಗೆ ಶಾಸಕರು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net