ಅಡಕೆಯೊಂದಿಗೆ ಉಪ ಬೆಳೆಯತ್ತ ಗಮನಹರಿಸಿ

Agriculture Workshop
Published on

ಯಲ್ಲಾಪುರ: ರೈತರು ಅಡಕೆಯೊಂದರತ್ತಳೇ ಗಮನಹರಿಸದೆ ಬಹು ಬೇಡಿಕೆಯುಳ್ಳ ಕಾಳುಮೆಣಸು, ಏಲಕ್ಕಿ, ದಾಲ್ಚಿನ್ನಿ, ಲವಂಗ, ಜಾಯಿಕಾಯಿ, ಇತ್ಯಾದಿ ಬೆಳೆಗಳನ್ನು ಕೂಡಾ ಉಪಬೆಳೆಯಾಗಿ ಬೆಳೆಯಲು ಮುಂದಾಗಬೇಕಿದೆ ಎಂದು ಅಪ್ಪಂಗಳದ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಹೊನ್ನಪ್ಪ ಹೇಳಿದರು.

ತಾಲೂಕಿನ ಕುಂದರಗಿ ಗ್ರಾ.ಪಂ.ವ್ಯಾಪ್ತಿಯ ಉಚಗೇರಿಯ ಶ್ರೀ ವಜ್ರೇಶ್ವರಿ ದೇವಾಲಯದ ಆವರಣದಲ್ಲಿ ಭಾರತೀಯ ಕೃಷಿ ಸಂಶೋಧನಾ ಅನುಸಂಧಾನ ಪರಿಷತ್ ನವದೆಹಲಿ, ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಸ್ಕೊಡ್​ವೆಸ್ ಶಿರಸಿ ಮತ್ತು ಕೆ.ಎನ್.ಸಿ. ರೈತ ಉತ್ಪಾದಕರ ಸಂಸ್ಥೆ ಕುಂದರಗಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಅವರು ರೈತರೊಂದಿಗೆ ಸಂವಾದ ನಡೆಸಿದರು.

ವಿವಿಧ ಸಾಂಬಾರು ಬೆಳೆಗಳನ್ನು ಬೆಳೆಯುವ ಅವಕಾಶವಿದ್ದರೂ ರೈತರಲ್ಲಿ ಆಸಕ್ತಿಯ ಕೊರತೆ ಕಂಡುಬರುತ್ತಿದೆ. ಆದ್ದರಿಂದ ರೈತರು ವೈವಿಧ್ಯಮಯ ಬೆಳೆಗಳನ್ನು ತಜ್ಞರ ಮಾರ್ಗದರ್ಶನದೊಂದಿಗೆ ವೈಜ್ಞಾನಿಕ ಆವಿಷ್ಕಾರಗಳ ಬಳಕೆಯೊಂದಿಗೆ ಬೆಳೆಯಲು ಮುಂದಾಗಬೇಕಿದೆ ಎಂದರು.

ಮುಖ್ಯವಾಗಿ ಅಡಕೆಗೆ ಆವರಿಸಿದ ಕೊಳೆರೋಗ ಮತ್ತು ಎಲೆಚುಕ್ಕೆ ರೋಗಗಳ ನಿವಾರಣೆಗಾಗಿ ಕೈಗೊಳ್ಳಬಹುದಾದ ಸರಳ ಮಾಗೋಪಾಯಗಳನ್ನು ವಿವರಿಸಿದರು.

ರೈತರು ತಮ್ಮ ತೋಟಗಳಲ್ಲಿ ಕಾಲುವೆ ಮತ್ತು ಬಸಿಗಾಲುವೆಗಳನ್ನು ಸಮರ್ಪಕವಾಗಿ ನಿರ್ವಿುಸಬೇಕು. ವಾತಾವರಣಕ್ಕನುಗುಣವಾದ ಬೆಳೆಯತ್ತ ಗಮನ ಹರಿಸಬೇಕು. ನಮ್ಮ ಕೃಷಿ ಸಂಶೋಧನಾ ಸಂಸ್ಥೆಯಿಂದ ಅಡಿಕೆಯೊಂದಿಗೆ ಬೆಳೆಯಬಹುದಾದ ಉಪಬೆಳೆಗಳ ಕುರಿತು ಅಗತ್ಯ ಮಾಹಿತಿಯನ್ನು ಆಸಕ್ತರಿಗೆ ನೀಡಲಾಗುವುದು ಎಂದರು.

ಶಿರಸಿಯ ಕೃಷಿ ವಿಜ್ಞಾನ ಕೆಂದ್ರದ ಡಾ.ಅರ್ಜುನ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಅಡಿಕೆ ಮರಗಳಿಗೆ ಶಿಲೀಂಧ್ರದಿಂದ 3 ರೀತಿಯ ಎಲೆಚುಕ್ಕೆ ರೋಗ ಆವರಿಸುತ್ತಿದೆ. ಗುಣಮಟ್ಟದ ಸುಣ್ಣ ಮತ್ತು ಮೈಲುತುತ್ತಗಳಿಂದ ತಯಾರಿಸುವ ಬೋಡೋ ದ್ರಾವಣವನ್ನು ಸೂಕ್ತ ಕ್ರಮದಲ್ಲಿ ಸಿಂಪಡಿಸಬೇಕು. ಅಡಕೆಗೆ ಮಾರಕವಾಗಿರುವ ಬೇರುಹುಳು ಮತ್ತು ಕೊಳೆರೋಗದ ಹತೋಟಿಗೆ ಪ್ರತಿವರ್ಷವೂ ತಮ್ಮ ಜಮೀನಿನ ಮಣ್ಣು ಪರೀಕ್ಷೆಯನ್ನು ತಜ್ಞರ ಮೂಲಕ ಮಾಡಿಸಬೇಕು ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮಂಜುನಾಥ, ಪ್ರಮುಖರಾದ ಗುರುಮೂರ್ತಿ ಹೆಗಡೆ ಮತ್ತು ರಮೇಶ ರಾವ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net