

ಮೈಸೂರು: ಶಿಕ್ಷಕರು ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರ ಮಠ ಸಲಹೆ ನೀಡಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಶಿಕ್ಷಕರ ಸಾಮರ್ಥ್ಯ ಸಂವರ್ಧನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಶಿಕ್ಷಣವು ಅತ್ಯಂತ ಪ್ರಬಲವಾದ ಅಸ್ತ್ರ. ಶಿಕ್ಷಣದಿಂದ ಇಡೀ ಜಗತ್ತನ್ನೆ ಬದಲಾಯಿಸಬಹುದು. ಜ್ಞಾನ ಮತ್ತು ಕೌಶಲ ಮನುಷ್ಯನ ಮೌಲ್ಯಯುತ ಪರಿಕರಗಳು. ಶಿಕ್ಷಣದಲ್ಲಿ ಅಭಿವೃದ್ಧಿಯಾದರೆ ಸಾಲದು, ಬೆಳವಣಿಗೆ ಎಂಬುದು ಅವಶ್ಯಕ ಎಂದರು. ಆವಿಷ್ಕಾರಗೊಂಡ ತಂತ್ರಜ್ಞಾನವನ್ನು ನಾಳೆ ಬಳಸಿಕೊಳ್ಳುವಷ್ಟರಲ್ಲಿ ಅದು ಹಳೆಯದಾಗುತ್ತಿದೆ. ಅಷ್ಟರ ಮಟ್ಟಿಗೆ ವೇಗವಾಗಿ ಜಗತ್ತು ಮುಂದುವರಿಯುತ್ತಿದೆ, ಅಂತಹ ಜಗತ್ತಿನಲ್ಲಿ ಓಡಬೇಕಾದರೆ ಶಿಕ್ಷಣ ಹಾಗೂ ಶಿಕ್ಷಕನ ಪಾತ್ರ ಬಹುಮುಖ್ಯವಾಗಿದೆ ಎಂದರು.
ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಮಾತನಾಡಿ, ಕಲಿಕೆಯು ಅತ್ಯಂತ ಆಳವಾದ ಹಾಗೂ ಬಲಿಷ್ಠವಾದ ಸಾಧನ. ಜತೆಗೆ ಅದ್ಭುತ ಪ್ರಕ್ರಿಯೆ. ಅದನ್ನು ಊಹಿಸಲೂ ಸಾಧ್ಯವಿಲ್ಲ. ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಪ್ರಬಲ ಅಸ್ತ್ರ. ಅದರಲ್ಲಿ ಅಷ್ಟು ವಿಚಾರಗಳಿವೆ. ಕಲಿಕೆಗೆ ಅಂತ್ಯವೇ ಇಲ್ಲ. ದಿನಕ್ಕೊಂದೊಂದು ಹೊಸ ವಿಚಾರಗಳನ್ನು ಕಲಿಯಲು ಸಮಾಜ ಅವಕಾಶ ಕಲ್ಪಿಸಿದೆ. ಅದರ ಸದ್ಬಳಕೆ ಮಾಡಿಕೊಳ್ಳುವುದು ಅವಶ್ಯಕ ಎಂದರು.
ಪ್ರಾಂಶುಪಾಲರಾದ ಡಾ.ಎಂ.ಪೂರ್ಣಿಮಾ, ಶೈಕ್ಷಣಿಕ ಡೀನ್ ಡಾ.ರೇಚಣ್ಣ ಇದ್ದರು.