ಸರ್ಕಾರಿ ಕೆಲಸ ನಿರೀಕ್ಷಿಸದೆ ಸ್ವ ಉದ್ಯೋಗದತ್ತ ಗಮನ ಹರಿಸಿ: ಆರ್.ಕೆ.ಬಾಲಚಂದ್ರ

vipra kridakuta
Published on

ಮಡಿಕೇರಿ: ಜನಾಂಗದ ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಹೊಂದಿ ಸರ್ಕಾರಿ ಕೆಲಸವನ್ನು ನಿರೀಕ್ಷಿಸದೆ ಸ್ವ ಉದ್ಯೋಗದತ್ತ ಗಮನ ಹರಿಸಬೇಕು ಎಂದು ಮಾಜಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಹೇಳಿದರು.


ನಗರದ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ವಿಪ್ರ ಕ್ರೀಡಾಕೂಟದ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಹಾಗೂ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡದ ಅವರು, ಮುಂದಿನ ತಲೆಮಾರನ್ನು ಯೋಗ್ಯ, ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸುವ ದೊಡ್ಡ ಹೊಣೆಗಾರಿಕೆ ಸಮಾಜದ ಸದಸ್ಯರಿಗೆ ಇದೆ. ಜನಾಂಗದ ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಹೊಂದಿ ಸರ್ಕಾರಿ ಕೆಲಸವನ್ನು ನಿರೀಕ್ಷಿಸದೆ ಸ್ವ ಉದ್ಯೋಗದತ್ತ ಗಮನ ಹರಿಸಬೇಕು ಎಂದರು.


ರಾಮಾಯಣ, ಮಹಾಭಾರತ, ಭಗವದ್ಗೀತೆ-ಇವುಗಳ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿದರೆ ಮಕ್ಕಳು ಬದುಕಿನಲ್ಲಿ ಸೋಲುವುದಿಲ್ಲ. ಉತ್ತಮ ಜೀವನವನ್ನು ರೂಪಿಸುವುದರೊಂದಿಗೆ ಸಂಸ್ಕಾರಯುತ ಬದುಕನ್ನು ಸಾಗಿಸುತ್ತಾರೆ ಎಂದರು.


ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷೆ ಗೀತಾ ಗಿರೀಶ್ ಮಾತನಾಡಿ, ಜನವರಿ ತಿಂಗಳಲ್ಲಿ ಮೂರು ಭಾನುವಾರಗಳಂದು ಬ್ರಾಹ್ಮಣ ಸಮಾಜದವರಿಗೆ ಕ್ರೀಡಾಕೂಟಗಳನ್ನು ಆಯೋಜಿಸಿದ್ದು, ಈಗ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ ಸಹಕಾರಿಯಾಗಿದೆ. ಸುಖ-ದುಃಖ, ಸೋಲು- ಗೆಲುವು ಜೀವನದಲ್ಲಿ ಇದ್ದು ಅವುಗಳನ್ನು ಮೀರಿ ಬದುಕು ರೂಪಿಸಬೇಕು ಎಂದರು.


ಪ್ರತಿಭಾ ಪುರಸ್ಕಾರ: ಕಳೆದ ವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ಸಾಕ್ಷಿ, ಪ್ರಣಮ್ಯ ಕಿರಣ್, ಶ್ರೀಲಕ್ಷ್ಮಿ, ಆಂಚಲ್ ಜೋಶಿ, ನಿರೂಪಮ ಹಾಗೂ ಪದವಿ ಶಿಕ್ಷಣದಲ್ಲಿ ಹೆಚ್ಚು ಅಂಕಗಳಿಸಿದ ಅಪೂರ್ವ, ಸುಪ್ರಿಯಾ ಹಾಗೂ ಸುಪ್ರಭಾ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.


ಸಾಧಕರಿಗೆ ಸನ್ಮಾನ: ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ಸಮುದಾಯದ ಬಿ.ಪಿ.ರವಿಶಂಕರ್, ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಸಹನಾ ದಿನೇಶ್ ಹಾಗೂ ಎನ್.ಕೆ.ರಕ್ಷಾ, ಸಮಾಜ ಸೇವೆಗೆ ಎಚ್.ಆರ್.ಮುರಳೀಧರ್, ಧಾರ್ಮಿಕ ಕ್ಷೇತ್ರದಲ್ಲಿ ವೆಂಕಟರಮಣ ಭಟ್ ಹಾಗೂ ಶಾಸ್ತ್ರೀಯ ನೃತ್ಯದಲ್ಲಿನ ಸಾಧನೆಗೆ ಪ್ರೇಕ್ಷ ಭಟ್ ಅವರುಗಳು ಸನ್ಮಾನಕ್ಕೆ ಭಾಜನರಾದರು. ಇದಲ್ಲದೆ ಎನ್.ಸಿ.ಸಿ ಪರವಾಗಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭ ನಡೆದ ಪಥಸಂಚಲನದಲ್ಲಿ ಭಾಗವಹಿಸಿದ್ದ ಸಿ.ಎಸ್.ರಘುವಂಶಿ ಹಾಗೂ ಎಂ.ಡಿ.ಆಯುಷ್‌ಅವರುಗಳನ್ನು ಗೌರವಿಸಲಾಯಿತು.


ವಿಜೇತರಿಗೆ ಬಹುಮಾನ: ವಿಪ್ರ ಕ್ರೀಡಾಕೂಟದ ಅಂಗವಾಗಿ ಹಲವು ದಿನಗಳಿಂದ ಸಮುದಾಯದ ಭಾಂಧವರಿಗೆ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕ್ರಿಕೆಟ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಒಳಾಂಗಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕಾರ್ಯದರ್ಶಿ ಬಿ.ಕೆ.ಜಗದೀಶ್, ಖಜಾಂಚಿ ಜಿ.ಆರ್.ರವಿಶಂಕರ್, ನಿರ್ದೇಶಕ ಸವಿತಾ ಭಟ್, ಪ್ರಭಾಕರ ನೆಲ್ಲಿತ್ತಾಯ, ಎ.ವಿ.ಮಂಜುನಾಥ, ಜಯಶೀಲಾ ಪ್ರಕಾಶ್, ಸಂಪತ್ ಕುಮಾರ್, ವೀಣಾ ಹೊಳ್ಳ, ರಾಜಶೇಖರ್, ಭರತೇಶ್ ಖಂಡಿಗೆ, ಹಿರಿಯರಾದ ಜಿ.ಟಿ.ರಾಘವೇಂದ್ರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net