

ಲಕ್ಷ್ಮೇಶ್ವರ: ಪಿಯು ಕಾಲೇಜು ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳು ಉನ್ನತ ಗುರಿ ಹೊಂದಿ ಶ್ರದ್ಧೆ, ನಿಷ್ಠೆಯಿಂದ ಅಭ್ಯಾಸದಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಿಸಿಎನ್ ವಿದ್ಯಾಸಂಸ್ಥೆಯ ನಿರ್ದೇಶಕಿ ಶಿಲ್ಪಾ ನೆಲವಿಗಿ ಹೇಳಿದರು.
ಪಟ್ಟಣದ ಬಿಸಿಎನ್ ವಿಜ್ಞಾನ, ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆಯೊಂದಿಗೆ ಕಲಿತ ಸಂಸ್ಥೆ, ಶಿಕ್ಷಕರು ಮತ್ತು ಹೆತ್ತವರಿಗೆ ಕೀರ್ತಿ ತರುವ ಆ ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಮಾತ್ರ ಚಿತ್ತ ಹರಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣವೇ ಸಂಪತ್ತು-ಶಕ್ತಿಯಾಗಿದೆ. ಜ್ಞಾನಾರ್ಜನೆ, ಶೈಕ್ಷಣಿಕ ಸಾಧನೆ ಮೂಲಕ ಪಾಲಕರು, ಶಿಕ್ಷಕರು ನಿಮ್ಮ ಮೇಲಿಟ್ಟಿರುವ ನಂಬಿಕೆ, ವಿಶ್ವಾಸ ಗಳಿಸಿಕೊಳ್ಳಬೇಕು. ಮೊಬೈಲ್ ದುರ್ಬಳಕೆಯಿಂದ ಅಮೂಲ್ಯವಾದ ಸಮಯ ವ್ಯರ್ಥ ಮಾಡದೇ ವಿದ್ಯಾರ್ಥಿ ಜೀವನದ ಜವಾಬ್ದಾರಿ ಅರಿತು ನಡೆಯಬೇಕು ಎಂದರು.
ಉಪಪ್ರಾಚಾರ್ಯ ಮಂಜುನಾಥ ಬಂಡಿವಾಡ, ಡಿ.ಎಂ. ಪೂಜಾರ ಮಾತನಾಡಿದರು. ಬಸವರಾಜ ಸಂಗಪ್ಪಶೆಟ್ಟರ, ಉಪನ್ಯಾಸಕರಾದ ಗಿರೀಶ ರಡ್ಡಿ, ವೃಷಭ, ರಮೇಶ, ಸುಧಾ, ವಿಜಯ ಎಂ., ರಾಜಶೇಖರಸ್ವಾಮಿ ಮತ್ತು ಸಿಬ್ಬಂದಿ ಹಾಜರಿದ್ದರು. ವಿದ್ಯಾರ್ಥಿಗಳಾದ ಸಂಗೀತಾ, ಶ್ರೇಷ್ಠಾ, ಶ್ವೇತಾ ಸ್ಪೂರ್ತಿ, ಅನುಷಾ ಹಾಗೂ ಕಾವ್ಯಾ ಕಾರ್ಯಕ್ರಮ ನಿರ್ವಹಿಸಿದರು.