

ರಬಕವಿ/ಬನಹಟ್ಟಿ: ಜೀವನದಲ್ಲಿ ಸೋಲು ಒಪ್ಪಿಕೊಳ್ಳುವುದನ್ನು ಕ್ರೀಡೆಯಿಂದ ಕಲಿಯಲು ಸಾಧ್ಯ ಎಂದು ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದರು.
ಸಮೀಪದ ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪ.ಪೂ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಮತ್ತು ಬಾಲಕಿಯರ ಥ್ರೋಬಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋತಾಗ ನಿರಾಶರಾಗದೆ ಕಾರಣ ಸೋಲಿಗೆ ಅರಿತು ಮುಂದಿನ ದಿನಗಳಲ್ಲಿ ಸತತ ಪ್ರಯತ್ನ, ಆತ್ಮವಿಶ್ವಾಸದೊಂದಿಗೆ ಆಡಿದಾಗ ಗೆಲುವು ನಿಶ್ಚಿತ. ಕ್ರೀಡೆಗಳು ವಿದ್ಯಾರ್ಥಿಗಳಿಗೆ ಶಿಸ್ತು, ನಾಯಕತ್ವ ಗುಣ ಕಲಿಸುತ್ತವೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಗಮನ ನೀಡಬೇಕು ಎಂದು ತಿಳಿಸಿದರು.
ಜಮಖಂಡಿಯ ಡಿವೈಎಸ್ಪಿ ಈ. ಶಾಂತವೀರ ಮಾತನಾಡಿ, ಕ್ರೀಡಾಪಟುಗಳಲ್ಲಿ ಕ್ರೀಡಾಸ್ಫೂರ್ತಿ ಮುಖ್ಯ. ಗ್ರಾಮೀಣ ಭಾಗದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವುದು ಕಠಿಣ ಕಾರ್ಯ. ಇದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಾಚಾರ್ಯ ಬಸವರಾಜ ಕೊಣ್ಣೂರ ಮಾತನಾಡಿದರು.
ಸಂಸ್ಥೆ ಉಪಾಧ್ಯಕ್ಷ ನಿಖಿಲ ಕೊಣ್ಣೂರ, ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ, ಗ್ರಾಪಂ ಅಧ್ಯಕ್ಷ ಮಹಾದೇವ ಮೋಪಗಾರ, ರಬಕವಿ ಬನಹಟ್ಟಿ ನಗರದ ಗಣ್ಯರಾದ ಧರೆಪ್ಪ ಉಳ್ಳಾಗಡ್ಡಿ, ಸುರೇಶ ಚಿಂಡಕ, ಶ್ರೀಶೈಲ ದಲಾಲ, ಶ್ರೀಶೈಲ ಉಳ್ಳಾಗಡ್ಡಿ, ಡಾ.ಟಿ.ಎ. ಅರಳಿಕಟ್ಟಿ, ಮಹಾವೀರ ದೇಸಾಯಿ, ಜಮಖಂಡಿ ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಜಿ.ಎಸ್. ವಡಗಾವಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ ಮುರಗೋಡ, ಜಿಲ್ಲಾ ಕ್ರೀಡಾ ಸಂಯೋಜಕ ಬಸವರಾಜ ಹೂಗಾರ, ಬಿ.ಆರ್. ಗೊಡ್ಡಾಳೆ, ಚಂದ್ರಕಾಂತ ಹೊಸೂರ ಇತರರಿದ್ದರು.