ವಾಣಿಜ್ಯ, ವ್ಯವಹಾರ ಅಧ್ಯಯನಗಳ ಕಡೆಗೂ ಇರಲಿ ಗಮನ

blm (5)
Published on

ಕಾರ್ಕಳ: ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು, 2025ರ ಮೇ ಸಾಲಿನ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಮತ್ತು ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಪ್ರೊ.ಗೋಪಾಲ ಮುಗೇರಾಯ ಸನ್ಮಾನಿಸಿದರು. ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ 2017-2020ರ ಬ್ಯಾಚ್‌ನ ಪದವಿ ವಿದ್ಯಾರ್ಥಿಗಳಾದ ರಚನಾ ಎಸ್.ಡಿ. ಮತ್ತು ಶೇಕ್ ಮೊಹಮ್ಮದ್ ಅಮಾನ್ ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ(ಐಸಿಎಐ) ಮೇ 2025 ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿಎ ಪದವಿ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು 2025-26ನೇ ಸಾಲಿನ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರೊ.ಗೋಪಾಲ ಮುಗೇರಾಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಮತ್ತು ಪಾಲಕರು ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನಗಳ ಕಡೆಗೂ ಗಮನ ನೀಡಬೇಕು, ಈ ಕ್ಷೇತ್ರಗಳಲ್ಲಿಯೂ ಅಪಾರವಾದ ಉದ್ಯೋಗಾವಕಾಶಗಳು ಇವೆ ಎಂದರು. ಸಿಎಸ್ ಮತ್ತು ಎಸಿಸಿಎ ಪರೀಕ್ಷೆಗಳ ಮೊದಲ ಹಂತವನ್ನು ಪೂರೈಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಡಾ.ಎನ್.ಎಸ್.ಎಂ. ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ. ಸ್ವಾಗತಿಸಿದರು. ಉಪನ್ಯಾಸಕಿ ನಿಶ್ಮಿತಾ ಶೆಟ್ಟಿ ವಂದಿಸಿದರು. ಐಕ್ಯೂಎಸಿ ಸಂಯೋಜಕ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ನಾವು ನಮ್ಮ ಆಲೋಚನೆಗಳನ್ನು ಸರಿಯಾದ ರೀತಿಯಲ್ಲಿ ಅನ್ವಯಿಸಬೇಕು ಆಗ ಮಾತ್ರ ನಮ್ಮ ಆಲೋಚನೆಗಳು ಪರಿಣಾಮಕಾರಿಯಾಗುತ್ತವೆ, ನಿಟ್ಟೆ ವಿಶ್ವವಿದ್ಯಾಲಯ ಅಂತಹ ಹೊಸ ಕನಸುಗಳಿಗೆ, ಆಲೋಚನೆಗಳಿಗೆ ಚಿಮ್ಮುಹಲಗೆಯಾಗಿದ್ದು ವಿದ್ಯಾರ್ಥಿಗಳು ನಿಟ್ಟೆ ವಿಶ್ವವಿದ್ಯಾಲಯದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. - ಪ್ರೊ.ಎಂ.ಎಸ್.ಮೂಡಿತ್ತಾಯ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net