

ದೇವದುರ್ಗ: ಮಳೆಗಾಲವಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಶುದ್ಧ ಕುಡಿವ ನೀರು ಒದಗಿಸಲು ಗಮಹರಿಸಬೇಕು ಎಂದು ಪಿಡಿಒಗಳಿಗೆ ತಾಪಂ ಇಒ ಬಸವರಾಜ ಹಟ್ಟಿ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಕುಡಿವ ನೀರಿನ ತೊಟ್ಟಿ, ಹೇರ್‌ಟ್ಯಾಂಕ್, ಟ್ಯಾಬ್ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕುಡಿವ ನೀರಿನ ಕೆರೆಗಳ ಸ್ವಚ್ಛತೆಗೆ ಗಮನ ನೀಡಬೇಕು. ಪೈಪ್‌ಗಳು ಲೀಕ್ ಆದರೆ, ಒಡೆದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ರಿಪೇರಿ ಮಾಡಿ ಶುದ್ಧ ನೀರು ಪೂರೈಕೆ ಮಾಡಬೇಕು ಎಂದು ಸೂಚಿಸಿದರು.
ಗ್ರಾಪಂಗಳ ಕಸ ವಿಲೇವಾರಿ ವಾಹನಗಳ ವಿಮೆ ಮಾಡಿಸಬೇಕು. ವಾಹನ ಚಾಲಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು. ಘನ ತ್ಯಾಜ್ಯ ಘಟಕದಲ್ಲಿ ಹಸಿ, ಒಣಕಸ ವಿಂಗಡನೆ ಮಾಡಿ ವಿಲೇವಾರಿ ಮಾಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಕರ ವಸೂಲಿಗೆ ಆದ್ಯತೆ ನೀಡಿ ಗುರಿ ತಲುಪಬೇಕು. 33 ಗ್ರಾಪಂ ವ್ಯಾಪ್ತಿಯಲ್ಲಿ ಇ ಹಾಜರಾತಿ ಕಡ್ಡಾಯವಾಗಿ ಮಾಡಬೇಕು. ಕೂಸಿನ ಮನೆ ಬಗ್ಗೆ ಕಾಳಜಿವಹಿಸಿ ವೇಳಾಪಟ್ಟಿ ಪ್ರಕಾರ ಊಟ, ಉಪಾಹಾರ ನೀಡಬೇಕು. ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಪಂಚಾಯತ್ ರಾಜ್ ನಿರ್ದೇಶಕಿ ಮಹೇಶ್ವರಿ, ತಾಪಂ ಎಇ ಅಣ್ಣರಾವ್ ನಾಯಕ, ಪಿಡಿಒಗಳಾದ ನರಸಣ್ಣ, ಮೊಹಿನುದ್ದೀನ್, ಶರಣಪ್ಪ, ಶಿವರಾಜ, ವೆಂಕಟೇಶ ಇತರರಿದ್ದರು.