ಹರಿಯುವ ನೀರಿನಲ್ಲಿ‌ ನೊರೆ, ಜನರು ಆತಂಕ

IMG-20240104-WA0003.jpg
Published on

ಮೂಡಲಗಿ: ಹರಿಯುವ ನೀರಿನ ಮಧ್ಯೆ ನಿಧಾನಕ್ಕೆ ಬಂದು ಸೇರುತ್ತಿರುವ ನೊರೆ, ನೋಡ ನೋಡುತ್ತಿದ್ದಂತೆಯೆ ನೀರಿನ ಮೇಲೆಯೇ ರಾಶಿಯಾಗಿ ನಿಲ್ಲುತ್ತಿದೆ. ಪಟ್ಟಣದ ಮಧ್ಯದಲ್ಲಿ ಹರಿಯುವ ಹಳ್ಳದಲ್ಲಿ ಗುರುವಾರ ಬೆಳಿಗ್ಗೆ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇದೇ ಮೊದಲ ಬಾರಿಗೆ ಈ ರೀತಿ ಹಳ್ಳದಲ್ಲಿ ನೊರೆ ಹರಿದು ಬಂದಿದ್ದು, ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಪಟ್ಟಣದ ಚರಂಡಿ, ಬಸ್ ನಿಲ್ದಾಣ ಪಕ್ಕದ ಶೌಚಗೃಹ ಹತ್ತಿರ ತ್ಯಾಜ್ಯ ತುಂಬಿದ್ದು, ಎಲ್ಲೆಂದರಲ್ಲಿ ಗಬ್ಬೆದ್ದು ನಾರುತ್ತಿದೆ. ಈ ಅವಸ್ಥೆಯಿಂದ ಸೊಳ್ಳೆ, ನೋಣ, ಕ್ರೀಮಿ ಕೀಟಗಳಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.
ಪಟ್ಟಣದ ಅರ್ಧ ಭಾಗದ ಮನೆಗಳ ಕೊಳಚೆ ನೀರು ಇದೇ ಹಳ್ಳಕ್ಕೆ ಬಿಡುತ್ತಾರೆ. ಚರಂಡಿ ನೀರಿನ ಜತೆಗೆ ಈ ಮಲಿನ ನೀರು ಹಳ್ಳದಲ್ಲಿ ಮಡುಗಟ್ಟಿ ನಿಂತು, ಜಲಮೂಲ ಕಲುಷಿತಗೊಂಡಿದೆ. ಮಳೆಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಈ ಹಳ್ಳದಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಆದರೆ, ಗುರುವಾರ ಹಳ್ಳದ ಒಡಲಲ್ಲಿದ್ದ ವಿಷಯುಕ್ತ ನೀರು ನೊರೆಯಾಗಿ ಪರಿವರ್ತನೆಯಾಗಿರಬಹುದು ಎಂಬ ಶಂಕೆಯನ್ನು ಈ ಭಾಗದ ಜನರು ವ್ಯಕ್ತಪಡಿಸಿದ್ದಾರೆ.
ಹಲವು ತಿಂಗಳಿಂದ ಮಲಿನಗೊಂಡ ಹಳ್ಳದ ನೀರನ್ನ ಕಂಡು ಕಾಣದವರಂತೆ ವರ್ತಿಸುತ್ತಿರುವ ಪುರಸಭೆಯ ಮುಖ್ಯಧಿಕಾರಿ, ಇಂಜಿಯರ್, ಆರೋಗ್ಯ ನಿರೀಕ್ಷಿಕ ಇನ್ನಾದರೂ ಜನರ ಹಿತದೃಷ್ಟಿಯಿಂದ ಈ ಸಮಸ್ಯೆಯಿಂದ ಜನರಿಗೆ ಪರಿಹಾರ ಮಾಡುತ್ತಾರೋ? ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net