

ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮತ್ತು ವಿಭಾಗದ ನಿಕಟಪೂರ್ವ ಅಧ್ಯಕ್ಷರೂ ಆದ ಡಾ.ಕೆ.ಎನ್.ಅಮೃತೇಶ್ 2025ನೇ ಸಾಲಿನ ಪ್ರತಿಷ್ಠಿತ ‘ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಫೆಲೋ ಶಿಪ್’ (ಎಫ್‌ಎನ್‌ಎಸಿ) ಗೌರವಕ್ಕೆ ಪಾತ್ರರಾಗಿದ್ದಾರೆ.
ಡಾ.ಕೆ.ಎನ್.ಅಮೃತೇಶ್ ಅವರು ಕೃಷಿ ಮತ್ತು ಸಸ್ಯವಿಜ್ಞಾನ ಕ್ಷೇತ್ರಕ್ಕೆ ನೀಡಿದ ಮಹತ್ತರ ಕೊಡುಗೆಗಾಗಿ ಈ ಮನ್ನಣೆಯನ್ನು ನೀಡಲಾಗಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಅಮೃತೇಶ್ ಅವರು ತಮ್ಮ ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪೂರ್ಣಗೊಳಿಸಿದ್ದಾರೆ. ಕೃಷಿ ವಿಜ್ಞಾನ ಹಾಗೂ ಸಸ್ಯವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಗಣನೀಯ ಕೊಡುಗೆಯನ್ನು ಗುರುತಿಸಿ 2022ರಲ್ಲಿ ಕರ್ನಾಟಕ ಸರ್ಕಾರವು ‘ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಫೆಲೋಶಿಪ್’ (ಎಫ್ ಕೆಸ್‌ಟಿಎ) ಮತ್ತು 2023ನೇ ಸಾಲಿನ ‘ನ್ಯಾಷನಲ್ ಅಕಾಡೆಮಿ ಆಫ್ ಬಯೋಲಾಜಿ ಕಲ್ ಸೈನ್ಸ್’ನ(ಎಫ್‌ಎನ್‌ಎಬಿಎಸ್) ಗೌರವ ಫೆಲೋಶಿಪ್ ಅನ್ನು ನೀಡಿ ಗೌರವಿಸಿದೆ. ಡಾ.ಅಮೃತೇಶ್ ಅವರು ಸಸ್ಯ ಆರೋಗ್ಯ ಕ್ಷೇತ್ರದಲ್ಲಿ 5 ಪೇಟೆಂಟ್‌ಗಳನ್ನು ಹೊಂದಿದ್ದು, 14 ಪುಸ್ತಕ ಅಧ್ಯಾಯಗಳನ್ನು ಬರೆದು, 16 ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಗಾಗಿ, 93 ಪೋಸ್ಟ್ ಡಾಕ್ಟರಲ್ ವಿದ್ಯಾರ್ಥಿಗಳಿಗೆ ಹಾಗೂ 4 ಸಂಶೋಧಕರಿಗೆ ಎಂ.ಫಿಲ್ ಪದವಿಗಾಗಿ ಮಾರ್ಗದರ್ಶನ ನೀಡಿದ್ದಾರೆ.
ಇವರಿಗೆ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್‌ನ ‘ಯುವ ವಿಜ್ಞಾನಿ ಪ್ರಶಸ್ತಿ’, ‘ಡಿ.ಎಸ್.ಟಿ. ಯುವ ವಿಜ್ಞಾನಿ ಪ್ರಶಸ್ತಿ’, ‘ಡಿ.ಬಿ.ಟಿ.-ಕ್ರಿಸ್ಟ್ ಅಂತಾರಾಷ್ಟ್ರೀಯ ಪ್ರಶಸ್ತಿ’, ‘ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ’ಗಳು ಲಭಿಸಿವೆ.