

ತುಮಕೂರು : ಸಿದ್ಧಗಂಗಾ ಮಠಕ್ಕೆ ತೆರಳುವ ಮಾರ್ಗದ ಕ್ಯಾತಸಂದ್ರ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ರೈಲ್ವೆ ಓವರ್ ಬ್ರಿಡ್ಜ್ (ಫ್ಲೈಓವರ್) ನಿರ್ಮಾಣಕ್ಕೆ ಆರಂಭದಲ್ಲೇ ಅಪಸ್ವರ ಎದ್ದಿದೆ. ಇತಿಹಾಸ ಪ್ರಸಿದ್ಧ ಕ್ಯಾತಸಂದ್ರದ ಆದಿಶಕ್ತಿ ದೊಡ್ಡಮ್ಮ ದೇವಸ್ಥಾನಕ್ಕೆ ತೊಂದರೆಯಾಗದಂತೆ ಫ್ಲೈಓವರ್ ನಿರ್ಮಿಸದಿದ್ದರೆ ಈ ಭಾಗದ 33 ಹಳ್ಳಿಗಳ ಜನ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂಬ ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ.
ಕ್ಯಾತಸಂದ್ರದ ಆದಿಶಕ್ತಿ ದೊಡ್ಡಮ್ಮನವರ ದೇವಸ್ಥಾನದ ಆವರಣದಲ್ಲಿ ಭಾನುವಾರ ದೇವಸ್ಥಾನಕ್ಕೆ ನಡೆದುಕೊಳ್ಳುವ ಹಳ್ಳಿಗಳ 18 ಕೋಮಿನ ಮುಖಂಡರ ಸಭೆಯಲ್ಲಿ ಮಾತನಾಡಿದ ಪಟೇಲ್ ಅರುಣ್, ಕ್ಯಾತಸಂದ್ರದಿಂದ ಸಿದ್ಧಗಂಗಾ ಮಠಕ್ಕೆ ತೆರಳುವ ರಸ್ತೆಯಲ್ಲಿ ಉದ್ದೇಶಿತ ರೈಲ್ವೆ ಪ್ಲೈಓವರ್ ನಿರ್ಮಾಣಕ್ಕೆ ಲೆವೆಲ್ ಕ್ರಾಸಿಂಗ್‌ನಿಂದ ಉಭಯ ಕಡೆ 30 ಮೀಟರ್ ರೈಲ್ವೆ ಅಂಡರ್ ಬ್ರಿಡ್ಜ್ ಹಾಗೂ 100 ಮೀಟರ್ ರೈಲ್ವೆ ಓವರ್ ಬ್ರಿಡ್ಜ್ (ಪ್ಲೈಓವರ್) ನಿರ್ಮಾಣಕ್ಕೆ ನಮ್ಮ ತಕರಾರಿಲ್ಲ. 100 ಮೀಟರ್‌ಗಿಂತ ಹೆಚ್ಚಾದರೆ ಪ್ಲೈಓವರ್ ನಿರ್ಮಾಣಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸುಮಾರು 800-900 ವರ್ಷಗಳ ದೊಡ್ಡಮ್ಮನವರ ದೇವಾಲಯವು ಮಠದ ಮಾರ್ಗದಲ್ಲಿದ್ದು ರೈಲ್ವೆ ಪ್ಲೈಓವರ್ ಮಾಡಿದರೆ ಜಾತ್ರಾ ಮಹೋತ್ಸವ ನಡೆಸಲು ಅನನುಕೂಲವಾಗುತ್ತದೆ. ರೈಲ್ವೆ ಅಂಡರ್ ಬ್ರಿಡ್ಜ್ ಮಾಡಿದರೆ ಒಳಿತು ಎಂದರು.
ರೈಲ್ವೆ ಇಲಾಖೆಯವರು ಇತ್ತೀಚೆಗೆ ನೀಲನಕ್ಷೆಯಲ್ಲಿ 210 ಮೀಟರ್ ಎಂದು ತೋರಿಸಿದ್ದಾರೆ. ಯಾವುದೇ ಕಾರಣಕ್ಕೂ 210 ಮೀಟರ್ ಪ್ಲೈಓವರ್ ಮತ್ತು ಅಂಡರ್ ಬ್ರಿಡ್ಜ್ ನಿರ್ಮಾಣಕ್ಕೆ ನಾವು ಒಪ್ಪುವುದಿಲ್ಲ, ಈ ಹಿಂದೆ ಪ್ರಕಟಿಸಿರುವಂತೆ 100 ಮೀಟರ್ ಪ್ಲೈಓವರ್ ಹಾಗೂ 30 ಮೀಟರ್ ಅಂಡರ್ ಬ್ರಿಡ್ಜ್ ನಿರ್ಮಾಣವಾಗಲಿ ಎಂದು ಯಜಮಾನ್ ಗಂಗಹನುಮಯ್ಯ ಒತ್ತಾಯಿಸಿದರು.
ಸಂಸದ ಜಿ.ಎಸ್.ಬಸವರಾಜು ಹಾಗೂ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಈ ಭಾಗಕ್ಕೆ ಭೇಟಿ ನೀಡಿ ಕ್ಯಾತಸಂದ್ರವು ಸೇರಿ 33 ಹಳ್ಳಿಗಳ 18 ಕೋಮಿನ ಯಜಮಾನರು ಹಾಗೂ ಜನಾಂಗದವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಕೆ.ಎನ್. ನರಸಿಂಹಮೂರ್ತಿ, ಕೆ.ಎಸ್.ಪಂಡಿತ್, ಯಜಮಾನ್ ಅರುಣ್‌ಕುಮಾರ್, ಪ್ರತಾಪ್ ಮದಕರಿ ಸೇರಿ 33 ಹಳ್ಳಿಗಳ 18 ಕೋಮಿನ ಜನಾಂಗದವರು, ಯಜಮಾನರು ಇದ್ದರು.