ಫ್ಲೈಓವರ್ ಕೆಲಸ 31ಕ್ಕೆ ಮುಕ್ತಾಯ

purasabhe new
Published on

ಕುಂದಾಪುರ: ಪುರಸಭೆಯ ಮಹತ್ವಾಕಾಂಕ್ಷಿ ಯೋಜನೆ ಜಲಸಿರಿ ಹಾಗೂ ದಶಕದಿಂದ ಕುಂಟುತ್ತ ಸಾಗುತ್ತಿರುವ ಫ್ಲೈ ಓವರ್ ಕಾಮಗಾರಿಯನ್ನು ಮಾರ್ಚ್ 31ರೊಳಗೆ ಮುಗಿಸುವ ಬಗ್ಗೆ ಗುತ್ತಿಗೆದಾರರು ಭರವಸೆ ನೀಡಿದ್ದು ಸಾರ್ವಜನಿಕರಿಗೆ ಎರಡು ಖುಷಿಯ ಸಂಗತಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಲಭಿಸಿದೆ.

ಮಾ.31ರೊಳಗೆ ಕಾಮಗಾರಿ ಮುಗಿಸಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡದಿದ್ದರೆ ಕಾನೂನು ಕ್ರಮದ ಎಚ್ಚರಿಕೆ ಕೂಡ ಸಿಕ್ಕಿದೆ. ಆಡಳಿತ ಪಕ್ಷದ ವಿ.ಪ್ರಭಾಕರ ಮಾತನಾಡಿ, ‘ಕುಂದೇಶ್ವರ ವಾರ್ಡ್‌ನಲ್ಲಿ ಉಪ್ಪು ನೀರು ಕುಡಿಯುತ್ತಿದ್ದಾರೆ. ಎರಡು ತಿಂಗಳಿಂದ ನೀರಿನ ಸಂಪರ್ಕ ನೀಡುವ ಕುರಿತು ಸುಳ್ಳು ಭರವಸೆ ನೀಡುತ್ತಿದ್ದೀರಿ. ಕುಡಿಯುವ ನೀರಿನ ವಿಷಯದಲ್ಲಿ ಸುಳ್ಳು ಹೇಳುವುದು ತರವಲ್ಲ’ ಎಂದು ಜಲಸಿರಿ ಯೋಜನೆ ಇಂಜಿನಿಯರ್ ಹಾಗೂ ಸಹಾಯಕರನ್ನು ತರಾಟೆಗೆ ತೆಗೆದುಕೊಂಡರು. ಪೂರಕವಾಗಿ ಮೋಹನದಾಸ್ ಶೆಣೈ ಮಾತನಾಡಿ ನೀರು ಪೂರೈಕೆ ಟ್ಯಾಂಕ್ ಸೋರುತ್ತಿದೆ. ಕಾಮಗಾರಿ ಕೂಡ ಆಮೆಗತಿಯಲ್ಲಿದೆ ಎಂದರು. ಪ್ರತಿಪಕ್ಷದ ಆಸಿಫ್ ಕೋಡಿ, ಕಮಲಾ ಹಾಗೂ ಲಕ್ಷ್ಮೀ ಕೋಡಿ ನೀರಿನ ಸಮಸ್ಯೆಗೆ ಸ್ಪಂದಿಸುವಂತೆ ಆಗ್ರಹಿಸಿದರು.

ರಸ್ತೆ ಕಟ್ಟಿಂಗ್, ಇಂಟರ್‌ಲಾಕ್ ಅಳವಡಿಕೆ, ಬೀದಿದೀಪ, ಯುಜಿಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. ಗಿರೀಶ್ ದೇವಾಡಿಗ, ಸಂತೋಷ್ ಶೆಟ್ಟಿ, ದೇವಕಿ ಸಣ್ಣಯ್ಯ ಹಲವು ವಿಷಯಗಳ ಬಗ್ಗೆ ಗಮನ ಸೆಳೆದರು. ಸಭೆಗೂ ಮುನ್ನ ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಶೇಖರ ಪೂಜಾರಿ ಅಧ್ಯಕ್ಷರಾಗಿ ಆಯ್ಕೆಯಾದರು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

ತೆರಿಗೆ ಏರಿಕೆಗೆ ವಿರೋಧ

ಪುರಸಭೆ ತೆರಿಗೆ ಏರಿಕೆ ವಿರೋಧಿಸಿ ಪ್ರತಿಪಕ್ಷ ನಾಯಕರು ಸಭಾತ್ಯಾಗ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಜನ ಸಂಕಷ್ಟದಲ್ಲಿರುವಾಗ ತೆರಿಗೆ ಏರಿಕೆ ಜನವಿರೋಧಿ. ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಯಾವುದೇ ಕಾರಣಕ್ಕೂ ತೆರಿಗೆ ಏರಿಕೆ ಕೂಡದು. ಪುರಸಭೆ ತೆರಿಗೆ ಏರಿಸಿದರೆ ಜನರೊಟ್ಟಿಗೆ ಸೇರಿ ಪ್ರತಿಭಟಿಸಲಾಗುವುದು. ಆಡಳಿತದಲ್ಲಿ ಅಸಹಕಾರ ತೋರುವ ಮೂಲಕ ಹೋರಾಟ ನಡೆಸಲಾಗುತ್ತದೆ ಎಂದು ಪ್ರತಿಪಕ್ಷ ಸದಸ್ಯರು ಎಚ್ಚರಿಸಿದರು.

ವಿದ್ಯಾರ್ಥಿಗಳಿಂದ ಶೌಚಗೃಹ ಸ್ವಚ್ಛತೆ ಸಲ್ಲ

ಪ್ರತಿಪಕ್ಷ ನಾಯಕ ಚಂದ್ರಶೇಖರ ಖಾರ್ವಿ ಶಾಲೆಗಳ ಬಗ್ಗೆ ಕೇಳಿದ ಮಾಹಿತಿಗೆ ಉತ್ತರಿಸಿದ ಶಿಕ್ಷಣ ಇಲಾಖೆ ಅಧಿಕಾರಿ, ಖಾಸಗಿ ಶಾಲೆ ಹೊರತುಪಡಿಸಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶೌಚಗೃಹಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳೇ ಸ್ವಚ್ಛ ಮಾಡಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪಿಸಿದ ಖಾರ್ವಿ, ಮಕ್ಕಳು ಶಾಲೆಗೆ ವಿದ್ಯಾಭ್ಯಾಸಕ್ಕೆ ಹೋಗುತ್ತಾರಾ? ಶೌಚಗೃಹ ಸ್ವಚ್ಛಗೊಳಿಸಲು ಹೋಗುತ್ತಾರಾ? ಇದು ಸರಿಯಲ್ಲ. ಸರ್ಕಾರವೇ ಶಾಲೆಗಳ ಶೌಚಗೃಹ ಸ್ವಚ್ಛ ಮಾಡಲು ವ್ಯವಸ್ಥೆ ಮಾಡುವಂತೆ ನಿರ್ಣಯ ಮಂಡಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುವಂತೆ ಸಲಹೆ ಮಾಡಿದರು.

ಕುಂದಾಪುರ ಪುರಸಭೆಯಲ್ಲಿ ಆರಂಭಿಸಿದ 23 ಕೋಟಿ ರೂ. ವೆಚ್ಚದ ಜಲಸಿರಿ ಯೋಜನೆ ಹಾಗೂ ಶಾಸ್ತ್ರಿ ವೃತ್ತದ ಫ್ಲೈ ಓವರ್ ಕಾಮಗಾರಿ ಮಾ.31ಕ್ಕೆ ಪೂರ್ಣವಾಗಲಿದ್ದು, ಫ್ಲೈಓವರ್ ಕಾಮಗಾರಿ ಅನಂತರ ಸರ್ವೀಸ್ ರಸ್ತೆ, ಚರಂಡಿ ಹಾಗೂ ಮಳೆ ನೀರು ಹರಿಯುವ ವ್ಯವಸ್ಥೆ ಸರಿ ಮಾಡಲಾಗುತ್ತದೆ ಎಂದು ಗುತ್ತಿಗೆದಾರರು ಭರವಸೆ ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಕಾಮಗಾರಿ ಮುಗಿಸದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ತೆಗೆದುಕೊಳ್ಳಲು ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗುತ್ತದೆ.

ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ

ಜಲಸಿರಿ ಯೋಜನೆಯಲ್ಲಿ ನೀರಿನ ಸಂಪರ್ಕ ಪಡೆಯಲು ಚಲನ್ ಕಟ್ಟಿದವರಿಗೆ ಸಂಪರ್ಕ ನೀಡಿಲಾಗುತ್ತದೆ. ಕೋಡಿಯಲ್ಲಿ 650 ಮನೆಗಳ ಸರ್ವೇ ಮಾಡಿದ್ದು, 184 ಹೊಸ ಅರ್ಜಿ ಬಂದಿದೆ. 68 ಮನೆಯವರು ಚಲನ್ ಕಟ್ಟಿದ್ದು, ಅವರಿಗೆ ನೀರಿನ ಸಂಪರ್ಕ ನೀಡಲಾಗುತ್ತದೆ. ಕುಂದಾಪುರದ ಎಲ್ಲ ವಾರ್ಡ್ ಸರ್ವೇ ಮಾಡಿ ನೀರಿನ ಸಂಪರ್ಕ ಬೇಕಾದವರು ಅರ್ಜಿ ಕೊಟ್ಟು ಚಲನ್ ಕಟ್ಟಿದರೆ ಅವರಗೆ ಹೊಸ ಸಂಪರ್ಕ ನೀಡಲಾಗುತ್ತದೆ. ಜಲಸಿರಿ ಯೋಜನೆಗೆ ಹೊಸದಾಗಿ ಸೇರಿದ ಕಾಮಗಾರಿ ಹೊರತು ಪಡಿಸಿ ಉಳಿದ ಎಲ್ಲ ಕಾಮಗಾರಿ ಮಾ.31ರೊಳಗೆ ಸಂಪೂರ್ಣ ಮಾಡಲಾಗುತ್ತದೆ.

ಹರೀಶ್, ಇಂಜಿನಿಯರ್, ಜಲಸಿರಿ ಯೋಜನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net