ಮೇಲೇಳದ ‘ಮೇಲ್ಸೇತ್ಸುವೆ ಯೋಜನೆ!

Flyover Mumbai
Published on

ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಮಹಾನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಮೇಲ್ಸೇತುವೆ(ಫ್ಲೈಓವರ್)ನಿರ್ಮಾಣಕ್ಕೆ ಏಳು ವರ್ಷಗಳ ಹಿಂದೆಯೇ ಯೋಜನಾ ವೆಚ್ಚ ಸಿದ್ಧಪಡಿಸಲಾಗಿತ್ತು. ಆದರೆ, ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ನಡುವಿನ ಸಮನ್ವಯ ಕೊರತೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಯೋಜನೆ ಹಳ್ಳಹಿಡಿದಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ 2017-18ನೇ ಸಾಲಿನ ಅವಧಿಯಲ್ಲಿ 1000 ಕೋಟಿ ರೂ. ಯೋಜನೆಯಲ್ಲಿ ಹೆಚ್ಚುವರಿಯಾಗಿ ರಾಷ್ಟ್ರೀಯ ಹೆದ್ದಾರಿಯಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಅಲ್ಲದೆ ಇದಕ್ಕಾಗಿ 100 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ತದನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಮೇಲ್ಸೇತುವೆ ನಿರ್ಮಾಣ 100 ಕೋಟಿ ರೂ. ಯೋಜನೆ ರೂಪಿಸಲಾಗಿತ್ತು. ಆದರೆ, ಮೇಲ್ಸೇತುವೆ ನಿರ್ಮಾಣ ಯೋಜನಾ ವೆಚ್ಚ 185 ಕೋಟಿ ರೂ.ಗೆ ಏರಿಕೆ ಹಾಗೂ ತಾಂತ್ರಿಕ ಕಾರಣ ಮುಂದಿಟ್ಟುಕೊಂಡು ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಲ್ಲ. ಬಳಿಕ ಪರಿಷ್ಕರಣೆ ಯೋಜನಾ ವೆಚ್ಚದ ವರದಿ ಸಲ್ಲಿಕೆ ಮಾಡದಿರುವ ಹಿನ್ನೆಲೆ ಸರ್ಕಾರವು ಮೇಲ್ಸೇತುವೆ ನಿರ್ಮಾಣ ಮಾಡುವುದನ್ನು ಕೈಬಿಟ್ಟಿದೆ ಎಂದು ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಯೋಜನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಪಷ್ಟೀಕರಣ ನೀಡದೇ ಇರುವುದಕ್ಕೆ ಹಿನ್ನೆಡೆ: ಕೇಂದ್ರ ಮತ್ತು ರಾಜ್ಯಸರ್ಕಾರದ ಸಹಯೋಗದಲ್ಲಿ 2023-24ನೇ ಸಾಲಿನಲ್ಲಿ ಲೋಕೋಪಯೋಗಿ ಸಚಿವರು ಪ್ಲೈಓವರ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಇಲ್ಲಿಯವರೆಗೆ ಯೋಜನೆ ರೂಪುರೇಷ ಆರಂಭಿಸಿಲ್ಲ. ಮತ್ತೊಂದೆಡೆ ರಾಜ್ಯ ಸರ್ಕಾರವು ಪ್ಲೈಓವರ್ ನಿರ್ಮಾಣ ಕುರಿತು ಅಧಿಕೃತವಾಗಿ ಒಪ್ಪಿಗೆ ನೀಡದಿರುವ ಹಿನ್ನೆಲೆಯಲ್ಲಿ ಯೋಜನೆ ದಾಖಲೆಗೆ ಸೀಮಿತಗೊಂಡಿದೆ. ಅಲ್ಲದೇ ಕೇಂದ್ರ ಸರ್ಕಾರಕ್ಕೆ ಮೇಲ್ಸೇತುವೆ ನಿರ್ಮಾಣ ಕುರಿತು ಸ್ಪಷ್ಟೀಕರಣ ನೀಡದಿರುವುದು ಕೂಡ ಯೋಜನೆಯ ಹಿನ್ನೆಡೆ ಪ್ರಮುಖ ಕಾರಣವಾಗಿದೆ.

ರಸ್ತೆಗಳ ಅಗಲೀಕರಣ ಹೆಚ್ಚಿದ ಒತ್ತಡ

ರಾಜ್ಯದ ಎಲ್ಲ ಮಹಾನಗರ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ಬೆಳಗಾವಿ ನಗರದಲ್ಲಿ ಮೂರು ರೈಲ್ವೆ ಮೇಲ್ಸೇತುವೆ ಹೊರತು ಪಡಿಸಿದರೆ ಬೇರೆ ಯಾವುದೇ ಮೇಲ್ಸೇತುವೆ ನಿರ್ಮಿಸಿಲ್ಲ. ರಸ್ತೆಗಳ ಅಗಲೀಕರಣ ಕೂಡ ಮಾಡಿಲ್ಲ. ನಗರದಲ್ಲಿ ವಾಹನಗಳ ಸಂಖ್ಯೆ, ಜನಸಂಖ್ಯೆ ಹೆಚ್ಚಾಗಿದೆ. ಆದರೆ, 2008ರಲ್ಲಿದ್ದ ರಸ್ತೆಗಳು 2024ರಲ್ಲಿ ಅಷ್ಟೇ ಇವೆ. ಯಾವುದೇ ರಸ್ತೆಗಳು ಅಗಲೀಕರಣಗೊಂಡಿಲ್ಲ, ಪಾದಚಾರಿಗಳ ಮಾರ್ಗಗಳು ನಿರ್ಮಾಣಗೊಂಡಿಲ್ಲ. ಸ್ಮಾರ್ಟ್‌ಸಿಟಿ ಯೋಜನೆ ಅವೈಜ್ಞಾನಿಕ ಕಾಂಕ್ರಿಟ್ ರಸ್ತೆಗಳ ನಿರ್ಮಾಣದಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕೇಂದ್ರ ಬಸ್ ನಿಲ್ದಾಣದ, ಕಾಲೇಜು ರಸ್ತೆ, ಆರ್‌ಪಿಡಿ ವೃತ್ತ ಹಾಗೂ ಪ್ರಮುಖ ವಾಹನ ಸಂಚಾರ ದಟ್ಟಣೆ ರಸ್ತೆಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ 15 ವರ್ಷಗಳಿಂದ ಬೇಡಿಕೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಆದರೆ, ನಗರ ಶಾಸಕರು, ಸಚಿವರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಉದ್ಯಮಿಗಳು, ವ್ಯಾಪಾರಿಗಳು ದೂರಿದ್ದಾರೆ.

ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ದೊಡ್ಡ ಪ್ರಮಾಣದಲ್ಲಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅವಶ್ಯಕವಾಗಿದೆ. ನಗರದಲ್ಲಿ ಮೇಲ್ಸೇತುವೆ ನಿರ್ಮಾಣದ ಅವಶ್ಯಕತೆ ಕುರಿತು ಅಧಿವೇಶನದಲ್ಲಿಯೇ ಕೇಂದ್ರ ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ. - ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net