ಮುಡಾದಿಂದ ಸುಗಮ ಸಂಚಾರಕ್ಕೆ ಮೇಲ್ಸೇತುವೆ

1
Published on

ಮೈಸೂರು: ನಗರದ ವರ್ತುಲ ರಸ್ತೆ (ರಿಂಗ್ ರೋಡ್)ಯ ಪ್ರಮುಖ ವೃತ್ತಗಳಲ್ಲಿ ಉಂಟಾಗಿರುವ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ಪ್ರಮುಖವಾಗಿ ವಿಜಯನಗರ 4ನೇ ಹಂತದ ಬಳಿಯ ರಿಂಗ್ ರಸ್ತೆಯ ಜಂಕ್ಷನ್, ಬೋಗಾದಿ ಜಂಕ್ಷನ್, ದಟ್ಟಗಳ್ಳಿ 3ನೇ ಹಂತದ ಸಾರಾ ಚೌಲ್ಟ್ರಿ ಜಂಕ್ಷನ್ ಹಾಗೂ ಜೆ.ಪಿ.ನಗರ ಕುಪ್ಪಲೂರು ರಸ್ತೆಯ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕಾಗಿ ಮೇಲ್ಸೇತುವೆ ಅಥವಾ ಅಂಡರ್ ಬ್ರಿಡ್ಜ್ ನಿರ್ಮಿಸಲು ಮುಡಾ ಕಾರ್ಯಪ್ರವೃತ್ತವಾಗಿದೆ.

ರಿಂಗ್ ರಸ್ತೆಯ ಸದರಿ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ, ಸರಣಿ ಅಪಘಾತದಂತಹ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿವೆ. ಇದನ್ನು ಮನಗಂಡು ನಾಲ್ಕು ಜಂಕ್ಷನ್‌ಗಳಲ್ಲಿ ಅಂಡರ್ ಪಾಸ್ ಅಥವಾ ಓವರ್ ಬ್ರಿಡ್ಜ್ ನಿರ್ಮಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬುಧವಾರ ಸ್ಥಳ ಪರಿಶೀಲನೆ ನಡೆಯಿತು.

ಸಂಸದ ಪ್ರತಾಪ್‌ಸಿಂಹ, ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ನೇತೃತ್ವದಲ್ಲಿ ರಿಂಗ್ ರಸ್ತೆಯ ಹಲವೆಡೆ ಸ್ಥಳ ಪರಿಶೀಲನೆ ನಡೆಸಿದರು. ಎಲ್ಲೆಲ್ಲಿ ಅಂಡರ್ ಪಾಸ್ ನಿರ್ಮಿಸಬೇಕು. ಎಲ್ಲಿ ಓವರ್ ಬ್ರಿಡ್ಜ್ ನಿರ್ಮಿಸಬೇಕು ಎಂದು ಚರ್ಚಿಸಿದರು.

ಮುಡಾ ಸದಸ್ಯರಾದ ಲಕ್ಷ್ಮೀದೇವಿ, ನವೀನ್‌ಕುಮಾರ್, ಕೆ.ಮಾದೇಶ್, ಲಿಂಗಣ್ಣ, ಕಾರ್ಯಪಾಲಕ ಇಂಜಿನಿಯರ್ ಎನ್.ಬಿ.ಚೆನ್ನಕೇಶವ್ ಹಾಗೂ ಇತರ ಅಧಿಕಾರಿಗಳು ಇದ್ದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ರಿಂಗ್ ರಸ್ತೆಯ ವಿಜಯನಗರ 4ನೇ ಹಂತ ರಸ್ತೆಯ ಜಂಕ್ಷನ್, ಬೋಗಾದಿ ಜಂಕ್ಷನ್, ದಟ್ಟಗಳ್ಳಿ 3ನೇ ಹಂತದ ಸಾರಾ ಚೌಲ್ಟ್ರಿ ಜಂಕ್ಷನ್ ಹಾಗೂ ಜೆ.ಪಿ.ನಗರ ಕುಪ್ಪಲೂರು ರಸ್ತೆಯ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಅನೇಕ ಅಪಘಾತ ಸಂಭವಿಸಿವೆ. ಈ ಜಂಕ್ಷನ್‌ಗಳಲ್ಲಿ ವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ. ಆದ್ದರಿಂದ ಸದರಿ ಜಾಗದಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಮುಂದಾಗಿದ್ದು, ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.

ಬ್ಲಾಕ್ ಸ್ಪಾಟ್‌ಗಳಾಗಿರುವ ರಿಂಗ್ ರಸ್ತೆ ಜಂಕ್ಷನ್‌ಗಳನ್ನು ಅಪಘಾತಮುಕ್ತ ವಲಯವಾಗಿ ಪರಿವರ್ತಿಸಲಾಗುವುದು. ಮೊದಲಿಗೆ ಈ ಸಂಬಂಧ ಡಿಪಿಆರ್ ಆಗಬೇಕು. ನಂತರ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಹೀಗಾಗಿ 5 ರಿಂದ ಆರು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.

ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಮಾತನಾಡಿ, ವಿಜಯನಗರ 4ನೇ, 3ನೇ ಹಂತದ ನಡುವಿನ ಬಸವನಹಳ್ಳಿ ಬಳಿ ವಾಹನ ಸಂಚಾರಕ್ಕೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲಾಗಿದೆ. ಇತ್ತೀಚೆಗೆ ಈ ಸ್ಥಳವು ಬ್ಲ್ಯಾಕ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಹೀಗಾಗಿ ಇಲ್ಲಿ ಓವರ್ ಬ್ರಿಡ್ಜ್ ಇಲ್ಲವೇ ಅಂಡರ್ ಪಾಸ್ ನಿರ್ಮಿಸಬೇಕೆ ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಬೋಗಾದಿ ಜಂಕ್ಷನ್‌ನಲ್ಲೂ ಅಪಾರ ಟ್ರಾಫಿಕ್ ಸಮಸ್ಯೆ ಇದ್ದು, ಸದರಿ ಜಾಗದಲ್ಲಿ ಮೈಸೂರು-ಬೋಗಾದಿ ಮಾರ್ಗದಲ್ಲಿ ಓವರ್ ಬ್ರಿಡ್ಜ್ ನಿರ್ಮಿಸಲು ಕ್ರಮ ವಹಿಸಲಾಗುತ್ತದೆ ಎಂದರು.

ಮ್ಯಾಜಿಕ್ ಬಾಕ್ಸ್ ಅಳವಡಿಕೆ:
ದಟ್ಟಗಳ್ಳಿ 3ನೇ ಹಂತದ ಸಾರಾ ಚೌಲ್ಟಿ ಬಳಿಯ ಜಂಕ್ಷನ್ ಟಿ ಆಕಾರದಲ್ಲಿರುವುದರಿಂದ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಇದನ್ನು ತಪ್ಪಿಸಲೆಂದು ಬೆಂಗಳೂರಿನ ಮಲ್ಲೇಶ್ವರಂ ಸೇರಿದಂತೆ ಹಲವು ಕಡೆ ಅಳವಡಿಸಿರುವಂತೆ ಮ್ಯಾಜಿಕ್ ಬಾಕ್ಸ್ ಅಳವಡಿಸಲಾಗುತ್ತದೆ ಎಂದರು. ಜೆ.ಪಿ ನಗರ ಹಾಗೂ ಕುಪ್ಪಲೂರು ನಡುವಿನ ರಿಂಗ್ ರಸ್ತೆ ಜಂಕ್ಷನ್ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಹೀಗಾಗಿ ಇಲ್ಲಿ ಅಂಡರ್‌ಪಾಸ್ ಮಾಡಬಹುದೇ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಕೊಲಂಬಿಯಾ ಏಷಿಯಾ ಜಂಕ್ಷನ್ ಹಾಗೂ ನಂಜನಗೂಡು ರಸ್ತೆ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಕೈಗೊಳ್ಳಲಿದೆ. ಎಚ್.ಡಿ.ಕೋಟೆ ರಸ್ತೆಯ ಪರಸಯ್ಯನಹುಂಡಿ ಜಂಕ್ಷನ್‌ನಲ್ಲೂ ಟ್ರಾಫಿಕ್ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಕ್ರಮ ವಹಿಸಲಿದೆ ಎಂದರು.
ಮುಂದಿನ ಮೂರ‌್ನಾಲ್ಕು ದಿನಗಳಲ್ಲಿ ಈ ಸಂಬಂಧ ಡಿಪಿಆರ್ ತಯಾರಿಸಲು ನುರಿತ ಸಂಸ್ಥೆಗಳಿಂದ ಟೆಂಡರ್ ಕರೆಯಲಾಗುವುದು. ಆ ಮೂಲಕ ಉತ್ತಮ ಯೋಜನೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಸರ್ಕಾರದಿಂದ ಅನುಮೋದನೆ ಪಡೆಯಲಾಗುವುದು. ಬಳಿಕ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ನಗರದ ಇಟ್ಟಿಗೆಗೂಡು ಬಡಾವಣೆಯ ಲಿಂಗಣ್ಣ ವೃತ್ತದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೂತನ ಕಟ್ಟಡ ನಿರ್ಮಾಣ ಮಾಡಿದ್ದು, ಸದರಿ ಕಟ್ಟಡವನ್ನು ಶೀಘ್ರ ಉದ್ಘಾಟಿಸಲಾಗುವುದು. ಬಳಿಕ ಮೈಸೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರದ ವಿಸ್ತರಣೆಗಾಗಿ ನೀಡಲಾಗುತ್ತದೆ. ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಅವರು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ.ಯಶಸ್ವಿ ಸೋಮಶೇಖರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net