ಫ್ಲೈಓವರ್ ಕಾಮಗಾರಿ ಬಹುತೇಕ ಪೂರ್ಣ

19mdk01
Published on

ಮಡಿಕೇರಿ:

ಕೊಡಗಿನ ಮೊದಲ ಫ್ಲೈಓವರ್ ಹೆಗ್ಗಳಿಕೆಯ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಈ ವರ್ಷ ಮಳೆಗಾಲದಲ್ಲಿ ಪಾದಚಾರಿಗಳ ಬಳಕೆಗೆ ಈ ಫೈಓವರ್ ಸಿಗುವ ಸಾಧ್ಯತೆಯಿದ್ದು, ರ‌್ಯಾಂಪ್ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರವಷ್ಟೇ ವಾಹನಗಳ ಓಡಾಟಕ್ಕೆ ಅವಕಾಶ ಸಿಗಲಿದೆ. ೩ ತಿಂಗಳಲ್ಲಿ ಕಾಮಗಾರಿ ಪೂರ್ಣವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಇದಕ್ಕಾಗಿ ಮುಂದಿನ ವರ್ಷದ ತನಕ ಕಾಯಬೇಕಾಗಬಹುದು.

ಮಳೆಗಾಲದ ಸಂದರ್ಭದಲ್ಲಿ ಪ್ರತಿ ವರ್ಷವೂ ವಾರಗಳ ಕಾಲ ದ್ವೀಪವಾಗಿ ಪರಿವರ್ತನೆ ಆಗುವ ಭಾಗಮಂಡಲ ನಿವಾಸಿಗಳ ಸಂಕಷ್ಟ ತಪ್ಪಿಸಲು ಶಾಶ್ವತ ಪರಿಹಾರಕ್ಕಾಗಿ ಸ್ಥಳೀಯರು ಸರ್ಕಾರದ ಮುಂದೆ ಬೇಡಿಕೆ ಇಡುತ್ತಲೇ ಬಂದಿದ್ದರು. ಇದರ ಫಲವಾಗಿ ೨೦೧೮ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಮೇಲ್ಸೇತುವೆ ಯೋಜನೆ ಕಾಮಗಾರಿಗೆ ಮಂಜೂರಾತಿ ಕೊಟ್ಟಿದಲ್ಲದೆ ಅದೇ ವರ್ಷಾಂತ್ಯಕ್ಕೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಕೆಲಸ ಶುರುವಾದ ಒಂದು ವರ್ಷದಲ್ಲಿ ಮೇಲ್ಸೇತುವೆ ಸಂಚಾರಕ್ಕೆ ಲಭ್ಯವಾಗಬೇಕಿತ್ತು. ಆದರೆ ಗಜಗರ್ಭದಂತಾದ ಕಾಮಗಾರಿಯಿಂದಾಗಿ ೨೦೨೩ರಲ್ಲೂ ಈ ಫ್ಲೈಓವರ್ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಬಳಕೆಗೆ ಸಿಗುವ ಸಾಧ್ಯತೆ ಕಡಿಮೆ ಇದೆ. ಪ್ರತಿ ವರ್ಷವೂ ಕಾಡುತ್ತಿದ್ದ ಪ್ರಾಕೃತಿಕ ವಿಕೋಪ, ಕೊರೊನಾ, ನಿಧಾನಗತಿಯ ಭೂಸ್ವಾದೀನ ಪ್ರಕ್ರಿಯೆ, ವಿದ್ಯುತ್ ಕಂಬಗಳ ವಿಳಂಬ ಹೀಗೆ ಹಲವು ಕಾರಣಗಳಿಂದ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ನಡೆದಿತ್ತು.

೨೦೨೨ರ ಜೂನ್ ಒಳಗೆ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ವಿಧಾನ ಪರಿಷತ್‌ನಲ್ಲಿ ಭರವಸೆ ನೀಡಿದ್ದರು. ಕಾಮಗಾರಿ ವಿಳಂಬ ಬಗ್ಗೆ ಅಂದಿನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೇಳಿದ್ದ ಪ್ರಶ್ನೆಗೆ ಕೊಟ್ಟಿದ್ದ ಉತ್ತರದಲ್ಲಿ ಈ ಭರವಸೆ ಸಿಕ್ಕಿತ್ತು.

ಈ ಬೆನ್ನಲ್ಲೇ ಕಾಮಗಾರಿಯೂ ಚುರುಕಾಗಿ ನಡೆಯುತ್ತಿತ್ತು. ಆದರೆ ಮಳೆಗಾಲ ಶುರುವಾಗಿದ್ದರಿಂದ ಮತ್ತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅಷ್ಟರಲ್ಲಿ ಒಟ್ಟು ೩೬ ಪಿಲ್ಲರ್‌ಗಳ ಪೈಕಿ ೨ ಪಿಲ್ಲರ್‌ಗಳ ಅಳವಡಿಕೆಗೆ ಭೂಸ್ವಾಧೀನದ ಸಮಸ್ಯೆ ಎದುರಾಗಿತ್ತು. ಈ ಎರಡು ಸ್ಥಳದಲ್ಲಿ ಜಾಗದ ಮಾಲೀಕರು ತಕಾರಾರು ತೆಗೆದ ಕಾರಣ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರರು ಕೈ ಚೆಲ್ಲಿದ್ದರು.

ನಿಧಾನಗತಿಯ ಕಾಮಗಾರಿಯಿಂದಾಗಿ ಸ್ಥಳೀಯರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈ ಭಾಗದಲ್ಲಿ ಸುರಿಯುವ ಜೋರು ಮಳೆ, ಇದರ ಜೊತೆಗೆ ಸಂಪೂರ್ಣ ಕೆಸರುಮಯವಾಗುವ ಮುಖ್ಯ ರಸ್ತೆ ಇದರಿಂದಾಗಿ ಸರ್ಕಸ್ ಮಾಡಿಕೊಂಡು ಓಡಾಡಬೇದ ಅನಿವಾರ್ಯತೆ ಸ್ಥಳೀಯರದ್ದಾಗಿತ್ತು. ಬೇಸಿಗೆಯಲ್ಲಿ ವಿಪರೀತ ಧೂಳು ಸ್ಥಳೀಯರನ್ನು ಹೈರಾಣಾಗಿಸುತ್ತಿತ್ತು.

ಇದೀಗ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿರುವುದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ತಿಂಗಳಿನಿಂದ ಕೊಡಗಿನಲ್ಲಿ ಮಳೆಯ ಅಬ್ಬರ ಶುರುವಾಗುತ್ತದೆ. ಎಂದಿನಂತೆ ಭಾಗಮಂಡಲ ಈ ವರ್ಷವೂ ದ್ವೀಪವಾಗುತ್ತದೆ. ಈ ಸಂದರ್ಭದಲ್ಲಿ ಪಾದಚಾರಿಗಳ ಓಡಾಟಕ್ಕೆ ಫೈಓವರ್ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ. ಮೇಲ್ಸೇತುವೆ ಮೇಲಿನ ಚಿಕ್ಕಪುಟ್ಟ ಕೆಲಸಗಳು ಮುಗಿದರೆ ಜನರ ನಡೆದಾಡಬಹುದಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಸಿಗಬೇಕಾದರೆ ಈ ಸೇತುವೆ ಸಂಪರ್ಕಿಸುವ ರ‌್ಯಾಂಪ್‌ಗಳ ಕಾಮಗಾರಿ ಪೂರ್ಣವಾಗಬೇಕು. ನಾಪೋಕ್ಲು ರಸ್ತೆ, ಮಡಿಕೇರಿ ರಸ್ತೆ ಹಾಗೂ ತಲಕಾವೇರಿ ರಸ್ತೆಗೆ ಸಂಪರ್ಕಿಸುವ ಭಾಗದಲ್ಲಿ ರ‌್ಯಾಂಪ್‌ಗಳ ನಿರ್ಮಾಣ ಆಗಬೇಕಿದೆ. ಇದೀಗ ನಾಪೋಕ್ಲು ರಸ್ತೆಯಲ್ಲಿ ರ‌್ಯಾಂಪ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಚ್ಛಾ ವಸ್ತುಗಳ ಪೂರೈಕೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದ ಕಾರಣ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

ಮುಂದಿನ ತಿಂಗಳು ಅಂತ್ಯಕ್ಕೆ ಮೂರು ಕಡೆಗಳಲ್ಲೂ ರ‌್ಯಾಂಪ್ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಷ್ಟರಲ್ಲಿ ಮಳೆಗಾಲ ಜೋರಾಗುವ ಸಾಧ್ಯತೆ ಇರುವುದರಿಂದ ಈ ಮಳೆಗಾಲಕ್ಕೆ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಸಿಗಲಿಕ್ಕಿಲ್ಲ. ಆದರೆ ೨೦೨೪ರ ಮಳೆಗಾಲದಲ್ಲಿ ಭಾಗಮಂಡಲದಲ್ಲಿ ರಸ್ತೆ ಮೇಲೆ ನೀರು ಬಂದರೂ ’ಫ್ಲೈ ಓವರ್ ಇದೆ’ ಎನ್ನುವ ನಂಬಿಕೆ ಮಳೆಗಾಲ ಎದುರಿಸಲು ಸ್ಥಳೀಯರಿಗೆ ಹೆಚ್ಚಿನ ಆತ್ಮಸ್ಥೈರ್ಯ ನೀಡಲಿದೆ.

ಪ್ರತಿ ವರ್ಷದ ಮಳೆಗಾಲದಲ್ಲಿ ಭಾಗಮಂಡಲ ನಿವಾಸಿಗಳು ಎದುರಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎನ್ನುವ ಕೂಗು ಮೊದಲಿನಿಂದಲೂ ಇತು. ಕಳೆದ ಬಾರಿಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಯದಲ್ಲಿ ಮೇಲ್ಸೇತುವೆ ಯೋಜನೆ ಪ್ರಸ್ತಾಪಕ್ಕೆ ಜೀವ ಸಿಕ್ಕಿತ್ತು. ಕಾವೇರಿ ನೀರಾವರಿ ನಿಗಮದ ಮೂಲಕ ೨೯.೬೨ ಕೋಟಿ ರೂ. ವೆಚ್ಚದಲ್ಲಿ ೨೦೧೮ರ ಅಂತ್ಯಕ್ಕ ಫ್ಲೈ ಓವರ್ ಕಾಮಗಾರಿ ಆರಂಭವಾಯಿತು. ಒಂದು ವರ್ಷದಲ್ಲಿ ಮುಗಿಯಬೇಕಿದ್ದ ಕೆಲಸ ೫ ವರ್ಷ ಎಳೆದಾಡಿಕೊಂಡು ಬಂದು ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಮಯಕ್ಕೆ ಪೂರ್ಣಗೊಳ್ಳುವ ಹಂತ ತಲುಪಿದೆ. ಕಾಂಗ್ರೆಸ್ ಸರ್ಕಾರದ ಮೂಲಕ ಆರಂಭವಾದ ಕಾಮಗಾರಿಗೆ ಕಾಂಗ್ರೆಸ್ ಸರ್ಕಾರ ಇರುವಾಗಲೇ ಉದ್ಘಾಟನೆಯ ಭಾಗ್ಯ ಸಿಕ್ಕುವಂತಾಗಿರುವುದು ವಿಶೇಷ.

ಭಾಗಮಂಡಲ ಮೇಲುಸೇತುವೆ ಕಾಮಗಾರಿ ಆದಷ್ಟು ಶೀಘ್ರ ಮುಗಿಸುವ ಬಗ್ಗೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನನ್ಣ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲೂ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡುವಂತೆ ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಕಾವೇರಿ ನೀರಾವರಿ ನಿಗಮದ ಎಇಇ ನವೀನ್ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್ ಕಂಬ ಅಳವಡಿಕೆ, ಸೇತುವೆ ಮೇಲ್ಭಾಗ ಶುಚಿತ್ವ ಕೆಲಸ ಉಳಿದುಕೊಂಡಿದೆ. ಇದು ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಮೇಲ್ಸೇತುವೆ ಸಂಪರ್ಕಿಸುವ ರ‌್ಯಾಂಪ್ ಕೆಲಸ ನಡೆಯುತ್ತಿದೆ. ಅದನ್ನು ಬೇರೆ ಗುತ್ತಿಗೆದಾರರು ನಿರ್ವಹಿಸುತ್ತಿದ್ದು, ರ‌್ಯಾಂಪ್ ಕೆಲಸ ಎಷ್ಟು ಬೇಗ ಮುಗಿಯುತ್ತದೋ ಅಷ್ಟು ಬೇಗ ಫ್ಲೈಓವರ್ ಸಾರ್ವಜನಿಕರಿಗೆ ಲಭ್ಯವಾಗಲಿದೆ.

  • ಹರಿನಾರಾಯಣ, ಭಾಗಮಂಡಲ ಮೇಲ್ಸೇತುವೆ ಯೋಜನೆ ವ್ಯವಸ್ಥಾಪಕ
  • ಫ್ಲೈ ಓವರ್ ಕೆಲಸದಿಂದ ಈತನ ಭಾಗಮಂಡಲ ನಿವಾಸಿಗಳು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಸದ್ಯಕ್ಕೆ ಕೆಲಸ ಮುಗಿದರೆ ಸಾಕು ಎನ್ನುವ ನಿರೀಕ್ಷೆಯಲ್ಲಿ ನಾವಿದ್ದೇವೆ. ಮೇಲ್ಸೇತುವೆ ಕೆಲಸ ಮುಗಿದಿದೆ. ರ‌್ಯಾಂಪ್ ನಿರ್ಮಾಣ ಕೆಲಸ ತುಂಬಾ ನಿಧಾನಗತಿಯಲ್ಲಿ ಆಗುತ್ತಿದೆ. ಈ ಮಳೆಗಾಲದಲ್ಲಿ ಸಾರ್ವಜನಿಕ ಬಳಕೆಗೆ ಸಿಕ್ಕಿದರೆ ಅನುಕೂಲ ಆಗುತ್ತಿತ್ತು.
  • ಶ್ರೀನಾಥ್ ನಾಯಕ್, ಭಾಗಮಂಡಲ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net