

ಮುರ್ನಾಡ್ ರಸ್ತೆಯ ಬಳಿಯ ಕೆಫೆಗೆ ಪುರಸಭೆಯಿಂದ 5,000 ದಂಡ.
ವಿರಾಜಪೇಟೆ : ಮುರ್ನಾಡ್ ರಸ್ತೆಯ ಬಳಿ ಇರುವ ಕೆಫೆಯೊಂದರಲ್ಲಿ ಗೋಬಿ ಮಂಚೂರಿ ತಿನ್ನುವ ವೇಳೆ ಟೊಮ್ಯಾಟೋ ಸಾಸ್‌ನಲ್ಲಿ ಹುಳಗಳು ಇರುವ ವಿಡಿಯೋ ವೈರಲ್ ಆಗಿದೆ. ಗ್ರಾಹಕರೊಬ್ಬರು ಶುಕ್ರವಾರ ಸಂಜೆ ಉಪಾಹಾರ ಸೇವಿಸಲೆಂದು ಕೆಫೆಗೆ ತೆರಳಿದ್ದರು.
ಗೋಬಿಗೆ ಸಾಸ್ ಹಾಕಲೆಂದು ಮುಂದಾದಾಗ ಅದು ತಟ್ಟೆ ಗೆ ಬೀಳಲೇ ಇಲ್ಲ. ಕೊನೆಗೆ ಸಾಸ್ ಡಬ್ಬಿ ಮುಚ್ಚಳ ತೆಗೆದು ನೋಡಿದಾಗ ಅದರಲ್ಲಿ ಸಾಕಷ್ಟು ಹುಳ ಇರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಪರಿಶೀಲನೆ ನಡೆಸಿ, ಪುರಸಭೆ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರ ಆದೇಶದ ಮೇರೆಗೆ 5,000 ರೂ. ದಂಡ ವಿಧಿಸಲಾಗಿದೆ. ಪುರಸಭೆಯ ಸಾಮಾಜಿಕ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಪ್ರಭಾರ ಆರೋಗ್ಯ ನಿರೀಕ್ಷಕಿ ಕೋಮಲಾ, ಸಹಾಯಕ ರಫೀಕ್, ಪರಿಸರ ಇಂಜಿನಿಯರ್ ರೀತು ಸಿಂಗ್ ಹಾಗೂ ಮಡಿಕೇರಿಯ ಆಹಾರ ಸುರಕ್ಷತಾ ಅಧಿಕಾರಿ ನವೀನ ಕುಮಾರ್ ಅವರ ತಂಡ ಶನಿವಾರ ಕೆಫೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಸ್ ವಶಕ್ಕೆ ಪಡೆದು ಕೆಫೆ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಆಹಾರ ಮತ್ತು ಸುರಕ್ಷತಾ ಗುಣಮಟ್ಟ ಕಾಯ್ದೆ ಇಲಾಖೆಯಿಂದ ಅನುಮತಿ ಪತ್ರ ಪಡೆದ ನಂತರವೇ ಕೆಫೆ ವಹಿವಾಟು ಮುಂದುವರಿಸಲು ಎಚ್ಚರಿಸಿದರು. ಅನುಮತಿ ಪತ್ರ ಪಡೆದ ನಂತರ ಮತ್ತೊಮ್ಮೆ ಕೆಫೆ ಆಹಾರ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತದೆ ಎಂದು ನವೀನ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ. ಕಳಪೆ ಸಾಸ್ ನೀಡಿದ್ದಕ್ಕಾಗಿ ಕೆಫೆಗೆ ಪುರಸಭೆ ವತಿಯಿಂದ 5,000 ರೂ. ದಂಡ ವಿಧಿಸಲಾಗಿದೆ. ಅಂಗಡಿ ಪರವಾನಗಿ ಈಗಾಗಲೇ ಮುಗಿದಿದ್ದು, ನವೀಕರಿಸಿಕೊಳ್ಳುವಂತೆ ಪುರಸಭೆ ಅಧಿಕಾರಿಗಳು ಕೆಫೆ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.