

ಬೆಳಗಾವಿ: ಇಲ್ಲಿನ ನಗರದ ಹ್ಯೂಮ್ ಪಾರ್ಕ್‌ನಲ್ಲಿ ಡಿ.13 ರಿಂದ 15 ರವರೆಗೆ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಜಿಲ್ಲಾ ಕೃಷಿಕ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ 65ನೇ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದ್ದಾರೆ.
ತೋಟಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಫಲ-ಪುಷ್ಪ ಪ್ರದರ್ಶನದ ಉದ್ಘಾಟಣೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಭಾಗವಹಿಸಲಿದ್ದಾರೆ. ಶಾಸಕ ಆಸೀಫ್ ಸೇಠ್ ಅವರು ಅಧ್ಯಕ್ಷತೆಯನ್ನು ವಹಿಸುವರು.
ಫಲಪುಷ್ಪ ಪ್ರದರ್ಶನದಲ್ಲಿ ಪ್ರಗತಿ ಪರ ರೈತರು ಬೆಳೆದಂತಹ ವಿಶೇಷ ಗುಣಮಟ್ಟ ಹೊಂದಿರುವ ತರಕಾರಿ, ಹಣ್ಣು, ಹೂವು, ಸಾಂಬಾರು ಹಾಗೂ ಪ್ಲ್ಯಾಂಟೆಶನ್ ಬೆಳೆಗಳನ್ನು ಪ್ರದರ್ಶಿಸಿಸಲಾಗುವುದು. ವಿವಿಧ ಜಾತಿಯ ಹೂವುಗಳಿಂದ ಅಲಂಕೃತ ಕಲಾಕೃತಿಗಳು, ಉಸುಕಿನ ಕಲೆ , ಹೂವುಗಳಿಂದ ಅಲಂಕೃತ ಮಹಾತ್ಮಾ ಗಾಂಧಿಜಿಯವರ ಪ್ರತಿಮೆ ಹಾಗೂ ಅವರ ಭಾವಚಿತ್ರಗಳ ಪ್ರದರ್ಶನ ಮತ್ತು ಐಫೆಲ್ ಟಾವರ್, ತೆಂಗಿನ ಕಲಾಕೃತಿಗಳು, ಹೂವು ಜೋಡನೆ, ಕುಂಡಗಳ ಜೋಡನೆ, ವಿದೇಶ ಹೂವುಗಳ ಪ್ರದರ್ಶನ, ಬೋನ್ಸಾಯ ಪ್ರದರ್ಶನ, ಕಟ್ ಹೂವುಗಳ ಪ್ರದರ್ಶನ, ತರಕಾರಿ, ಹಣ್ಣು ಕೆತ್ತನೆ ಪ್ರದರ್ಶಿಸಲಾಗುವುದು. ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ, ಜೈವಿಕ ಕೇಂದ್ರದಲ್ಲಿನ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುವುದು.
ಇಲಾಖೆಯ ವಿವಿಧ ಯೋಜನೆಗಳಲ್ಲಿ ಸೋಲಾರ ಪಂಪಸೆಟ್, ಹೈಡ್ರೋಪೊನಿಕ್ಸ, ಸ್ವಯಂಚಾಲಿತ ಹವಾಮಾನ ಆಧಾರಿತ ಘಟಕಗಳು ಮತ್ತು ವಿವಿಧ ಯಾಂತ್ರೋಪಕರಣಗಳ ಬಗ್ಗೆ ಮಾಹಿತಿ ಹಾಗೂ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ 6.30 ರಿಂದ 8.30 ಗಂಟೆಯವರೆಗೆ ಪ್ರತಿ ದಿನ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ