

ಅರಕೇರಾ: ನಿತ್ಯ ಸೇವಿಸುವ ಆಹಾರ ಮತ್ತು ಕುಡಿವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ್ ಇದ್ದಲ್ಲಿ ಫ್ಲೋರೋಸಿಸ್ ಉಂಟಾಗುತ್ತದೆ ಎಂದು ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಸಲಹೆಗಾರ ಗುರುಪ್ರಸಾದ ಹಿರೇಮಠ ಹೇಳಿದರು.
ತಾಲೂಕಿನ ಸಮುದ್ರ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಫ್ಲೋರೋಸಿಸ್ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕಾರ್ಯಕ್ರಮದ ಅಡಿ ಗುರುವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.
ಫ್ಲೋರೈಡ್‌ಯುಕ್ತ ನೀರು ಸೇವಿಸಿದರೆ ಮಕ್ಕಳಲ್ಲಿ ಕಂದು ಹಲ್ಲು, ವಯಸ್ಕರಲ್ಲಿ ಮೊಣಕಾಲು ನೋವು, ಕೀಲು ನೋವು ಹಾಗೂ ಕೀಲಿನ ಸವಕಳಿ, ರಕ್ತ ಹೀನತೆ ಉಂಟಾಗಬಹುದು. ಸಿ ಅನ್ನಾಂಗ ಹೆಚ್ಚಿರುವ ನಿಂಬೆ, ನೆಲ್ಲಿಕಾಯಿ, ಕಿತ್ತಳೆ, ಮೋಸಂಬಿ, ಸೀಬೆ ಹಣ್ಣು ಆಹಾರದಲ್ಲಿ ಸೇವಿಸಬೆಕು. ಕ್ಯಾಲ್ಸಿಯಂ ಹೆಚ್ಚಿರುವ ಹಾಲು, ಬೆಲ್ಲ, ಹಸಿರು ಸೊಪ್ಪು, ರಾಗಿ ಸೇವಿಸಿದರೆ ಫ್ಲೋರೋಸಿಸ್ ತಡೆಗಟ್ಟಬಹುದು ಎಂದರು.
ಫ್ಲೋರೋಸಿಸ್‌ನಿಂದ ಬಳಲುತ್ತಿರುವ ಶಂಕಿತರ ಆರೋಗ್ಯ ತಪಾಸಣೆ ನಡೆಸಿ, ಉಚಿತವಾಗಿ ಔಷಧಿ ವಿತರಿಸಲಾಯಿತು. ಐವತ್ತಕ್ಕೂ ಹೆಚ್ಚು ಜನರು ಹಾಗೂ ಶಾಲಾ ಮಕ್ಕಳು ತಪಾಸಣೆಗೆ ಒಳಪಟ್ಟರು.
ಆರೋಗ್ಯ ನಿರೀಕ್ಷಣಾಧಿಕಾರಿ ರಾಚನಗೌಡ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ದುರುಗಮ್ಮ, ಮಾಜಿ ಉಪಾಧ್ಯಕ್ಷ ಬಸವರಾಜ, ಪ್ರಯೋಗಾಲಯ ತಂತ್ರಜ್ಞ ಗಂಗಾಧರ, ಸಿಬ್ಬಂದಿಗಳಾದ ರಶಿದಾ ಬೇಗಂ, ಮಂಜುಳಾ, ಸಮಿನಾ ಸುಲ್ತಾನ್, ಗ್ರಾಪಂ ಸಿಬ್ಬಂದಿ ಶಿವರಾಜ, ಶಾಂತಪ್ಪ, ಪದ್ಮಾವತಿ, ಗ್ರಾಮಸ್ಥರಾದ ಮಲ್ಲಯ್ಯ ಕರ್ನಾಳ, ಮಂಜುನಾಥ ಪೂಜಾರಿ, ಮಂಜುನಾಥ ಕರಿಗುಡ್ಡ ಇತರರಿದ್ದರು.