

ಚಿಕ್ಕಬಳ್ಳಾಪುರ : ಹೂವುಗಳ ಬೆಲೆಯು ಹಂತ ಹಂತವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಉಂಟಾಗುತ್ತಿರುವ ನಷ್ಟಕ್ಕೆ ಬೆಳೆಗಾರರು ಕಣ್ಣೀರು ಸುರಿಸುತ್ತಿದ್ದು ಗಿಡಗಳನ್ನು ಕಿತ್ತು ಅನ್ಯ ಬೆಳೆಗಳನ್ನು ಬೆಳೆಯುವುದರತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಚೆಂಡು ಹೂವಿನ ಬೆಲೆ 5 ರೂಪಾಯಿಗೆ ಕುಸಿದಿದೆ. ನಿರ್ವಹಣೆ ವೆಚ್ಚ ಮತ್ತು ಮಾರಾಟದ ಬೆಲೆಯ ನಡುವಿನ ಅಜಗಜಾಂತರ ವ್ಯತ್ಯಾಸದಿಂದ ನಷ್ಟದ ಪ್ರಮಾಣವೂ ಹೆಚ್ಚಾಗುತ್ತಿದೆ. ಕಳೆದ ಶಿವರಾತ್ರಿ ಹಬ್ಬಕ್ಕೆ ಮೊದಲು ಕೆ.ಜಿ.ಗೆ ಗರಿಷ್ಠ 30 ರೂ. ಇತ್ತು. ಆದರೆ, ಹಬ್ಬದ ದಿನದಿಂದಲೇ ಕುಸಿಯುತ್ತ ಸಾಗುತ್ತಿದೆ. ಇದೀಗ ತೀವ್ರ ಕಡಿಮೆ ಬೆಲೆಗೆ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಕನಹಳ್ಳಿ, ಮಂಚನಬಲೆ ಸೇರಿ ವಿವಿಧ ಗ್ರಾಮಗಳಲ್ಲಿ ಹತ್ತಾರು ರೈತರು ಹೂವಿನ ಗಿಡಗಳನ್ನು ಕಿತ್ತು ಹಾಕಿಸಿದ್ದು ಬೇರೆ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ.
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಬಹುತೇಕ ದೊಡ್ಡ ಕಾರ್ಯಕ್ರಮ, ಧಾರ್ಮಿಕ ಉತ್ಸವ ಸೇರಿ ಇತರ ಚಟುವಟಿಕೆ ಮಂಕಾಗಿದೆ. ಎಲ್ಲ ಕಡೆ ಶಾಸ್ತ್ರಕ್ಕೆ ಎನ್ನುವಂತೆ ನಡೆಯುತ್ತಿವೆ. ಇದರಿಂದ ಅಲಂಕಾರಕ್ಕೆ ಬೇಕಾದ ಹೂವುಗಳಿಗೆ ಮಾರುಕಟ್ಟೆಯಲ್ಲಿ ಸಮರ್ಪಕ ಬೇಡಿಕೆ ಇಲ್ಲ. ಆದರೆ, ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ.
ಮಂಡಿಗಳಲ್ಲಿ ವ್ಯಾಪಾರಸ್ಥರು ಹೂವು ಖರೀದಿಸುತ್ತಿಲ್ಲ. ಇದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಮುಂಬರುವ ಯುಗಾದಿ ಹಬ್ಬದವರೆಗೂ ಏರಿಕೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ. ಈ ಭಾಗದ ಹೂವುಗಳು ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿ ವಿವಿಧೆಡೆ ಸಾಗಣೆಯಾಗುತ್ತದೆ. ಹವಾಮಾನ ವೈಪರೀತ್ಯದ ನಡುವೆ ಬತ್ತಿರುವ ಕೊಳವೆ ಬಾವಿ, ಅಸಮರ್ಪಕ ವಿದ್ಯುತ್ ಮತ್ತು ಬೆಳೆಗಳಿಗೆ ರೋಗ ಬಾಧೆ ಸೇರಿ ಹಲವು ಸಮಸ್ಯೆಗಳಿಂದ ಹೂವಿನ ಕೃಷಿ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ. ಇದರ ಜತೆಗೆ ಮಾರುಕಟ್ಟೆಯಲ್ಲಿ ಆಗಾಗ ಬೇಡಿಕೆ ಮತ್ತು ಬೆಲೆ ಕುಸಿತವು ಬೆಳೆಗಾರರನ್ನು ನಷ್ಟಕ್ಕೀಡು ಮಾಡುತ್ತಿದೆ.
ಹೆಚ್ಚಿನ ಪೂರೈಕೆ, ಆದ್ಯತೆ ಇಲ್ಲ : ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಬೆಳೆಗಾರರಿಂದ ಹೂವು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಗುಣಮಟ್ಟದ ಹೂವುಗಳಿಗೂ ಕಡಿಮೆ ಬೆಲೆ. ಉಳಿದಂತೆ ಸ್ವಲ್ಪ ಕಡಿಮೆ ದರ್ಜೆಯ ಹೂವುಗಳನ್ನು ಕೇಳುವವರೇ ಇಲ್ಲ.1 ಎಕರೆಯಲ್ಲಿ ಹೂವು ಬೆಳೆಯಲು ಬಿತ್ತನೆ ಬೀಜ ಮತ್ತು ರಸಗೊಬ್ಬರ, ಕೀಟನಾಶಕ, ಕೂಲಿ ಕಾರ್ಮಿಕರು ಮತ್ತು ಸಾಗಣೆ ಸೇರಿ ಇತರ ನಿರ್ವಹಣೆಗೆ ಕನಿಷ್ಠ 2 ಲಕ್ಷ ರೂ.ಬಂಡವಾಳ ಹೂಡಬೇಕಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಕೆ.ಜಿ.ದರ ಸರಾಸರಿ ಕನಿಷ್ಠ 40 ರಿಂದ 50 ರೂ. ಸಿಗಬೇಕು. ಕಳೆದ ಎರಡು ವರ್ಷಗಳ ಹಿಂದೆ ಹಬ್ಬ ಹರಿದಿನಗಳಲ್ಲಿ ಗರಿಷ್ಠ 90 ರಿಂದ 110 ರೂ. ಸಿಗುತ್ತಿತ್ತು. ಆದರೆ, ಕರೊನಾ ಕಾಡುತ್ತಿದ್ದಂತೆ ಹೂವಿನ ದರ ಕುಸಿತ ಹೆಚ್ಚಾಗಿದೆ.
ಎರಡೂವರೆ ಎಕರೆಯಲ್ಲಿ ಗುಣಮಟ್ಟದ ಚೆಂಡು ಹೂವು ಬೆಳೆಯಲಾಗಿದೆ. ಆದರೆ, ಕೆ.ಜಿ.ಹೂವಿಗೆ 5 ರಿಂದ 10 ರೂಪಾಯಿ ಸಿಗುತ್ತದೆ. ಇದರಿಂದ ಅಸಲು ನಷ್ಟ. ಇದಕ್ಕೆ ಜಮೀನಿನಲ್ಲಿನ ಹೂವನ್ನು ಕಿತ್ತು ಹಾಕಿ ಬೇರೆ ಬೆಳೆ ಬೆಳೆಯಲು ಯೋಚಿಸಿದ್ದೇನೆ. ಅಂಗೇಕನಹಳ್ಳಿ ರವಿಕುಮಾರ್, ಹೂವು ಬೆಳೆಗಾರ ನಿರಂತರವಾಗಿ ಹೂವಿನ ದರ ಕುಸಿತದಿಂದ ತುಂಬಾ ನಷ್ಟ ಉಂಟಾಗುತ್ತಿದೆ. ಹೂವು ಬೆಳೆಯಲು ಬೇಸರವಾಗುತ್ತಿದೆ. ಇತ್ತೀಚೆಗೆ ಹಬ್ಬ ಹರಿದಿನಗಳಲ್ಲೂ ಒಳ್ಳೆಯ ಆದಾಯ ಸಿಗುತ್ತಿಲ್ಲ. ಶ್ರೀನಿವಾಸ್, ಹೂವು ಬೆಳೆಗಾರರ