

ಹುಬ್ಬಳ್ಳಿ : ಗುಲಾಬಿ, ಬಲೂನು ನೀಡಿ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು... ರಂಗೋಲಿ, ತಳಿರು, ತೋರಣಗಳಿಂದ ಶೃಂಗಾರಗೊಂಡ ಶಾಲೆಗಳು... ಹೊಸ ಉತ್ಸಾಹದಿಂದ ಶಾಲೆಗಳತ್ತ ಮುಖ ಮಾಡಿದ ಚಿಣ್ಣರು...
ಶಾಲೆಗಳು ಪುನರರಾಂಭಗೊಂಡ ಶುಕ್ರವಾರದಂದು ಕಂಡುಬಂದ ದೃಶ್ಯಗಳಿವು. ಕಳೆದ ಎರಡು ತಿಂಗಳು ಬೇಸಿಗೆ ರಜೆಯಿಂದಾಗಿ ಶಾಲೆಗಳಿಂದ ದೂರ ಇದ್ದ ಮಕ್ಕಳು, ಇಂದು ಮರಳಿ ಹೊಸ ಸಮವಸ್ತ್ರ, ಬ್ಯಾಗ್, ಪುಸ್ತಕಗಳೊಂದಿಗೆ ಸಂತಸದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು.
ಮುಂದಿನ ತರಗತಿಗೆ ಬಡ್ತಿ ಪಡೆದ ಖುಷಿ ಮಕ್ಕಳ ಮನಸ್ಸಿನಲ್ಲಿ ಕಾಣುತ್ತಿತ್ತು. ಇದರೊಂದಿಗೆ ಸ್ನೇಹಿತರಿಂದ ಎರಡು ತಿಂಗಳು ದೂರ ಇದ್ದ ಮಕ್ಕಳು, ಇಂದು ಮತ್ತೆ ತಮ್ಮ ಸ್ನೇಹಿತರನ್ನು ಭೇಟಿ ಮಾಡುತ್ತೇವೆಂಬ ಸಂತಸವೂ ಅವರ ಮುಖದಲ್ಲಿ ಕಾಣುತ್ತಿತ್ತು.
ಆಟೋ, ಬಸ್ ಹಾಗೂ ಪಾಲಕರ ವಾಹನಗಳಲ್ಲಿ ಶಾಲೆಗಳಿಗೆ ಬಂದ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರ ತಂಡ ಶಾಲೆಯ ಮುಂಭಾಗದಲ್ಲಿಯೇ ಸಾಲುಗಟ್ಟಿ ನಿಂತಿದ್ದರು. ಮಕ್ಕಳ ಸ್ವಾಗತಕ್ಕಾಗಿ ಶಾಲೆಯ ಆವರಣದಲ್ಲಿ ಚಿತ್ತಾರದ ರಂಗೋಲಿಗಳನ್ನು ಬಿಡಿಸಲಾಗಿತ್ತು. ಕೆಲ ಶಾಲೆಗಳಿಗೆ ತಳಿರು, ತೋರಣ ಕಟ್ಟಲಾಗಿತ್ತು. ಸರ್ಕಾರಿ ಹಾಗೂ ಖಾಸಗಿ ಎರಡೂ ರೀತಿಯ ಶಾಲೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ಮಕ್ಕಳು ಶಾಲೆಯ ಆವರಣದಲ್ಲಿ ಕಾಲಿಡುತ್ತಲೇ ಅವರಿಗೆ ಗುಲಾಬಿ ಹೂವು, ಚಾಕೋಲೇಟ್ ಹಾಗೂ ಬಲೂನುಗಳನ್ನು ನೀಡಲಾಯಿತು. ತರಗತಿಯ ಬ್ಲಾಕ್ಬೋರ್ಡ್ನಲ್ಲಿ ಮಕ್ಕಳಿಗೆ ಸ್ವಾಗತದ ಬರಹಗಳನ್ನು ಬರೆಯಲಾಗಿತ್ತು. ತರಗತಿಗಳಲ್ಲಿ ಕಾಲಿಟ್ಟ ಮಕ್ಕಳು, ತಮ್ಮಸ್ನೇಹಿತರನ್ನು ಕಂಡು ಪರಸ್ಪರ ಆಲಂಗನ ಮಾಡಿದರು. ರಜಾ ದಿನಗಳಲ್ಲಿ ಊರಿಗೆ ಹೋಗಿದ್ದು, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದ ಅನುಭವಗಳನ್ನು ಹಂಚಿಕೊಂಡರು.
ಹೊಸತಾಗಿ ಖರೀದಿಸಿದ ಬ್ಯಾಗ್ಗಳನ್ನು ಒಬ್ಬರಿಗೊಬ್ಬರು ತೋರಿಸಿ, ಸಂತಸ ಹಂಚಿಕೊಂಡರು.