

ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ವಿಶೇಷ ಹಬ್ಬಗಳ ಆಚರಣೆಯ ಸಂದರ್ಭದಲ್ಲೂ ಬೇಡಿಕೆ ಮತ್ತು ಉತ್ತಮ ಬೆಲೆ ಸಿಗದ ಹಿನ್ನೆಲೆಯಲ್ಲಿ ಬಹುತೇಕ ರೈತರು ಜಮೀನುಗಳಲ್ಲಿನ ಹೂವಿನ ಬೆಳೆಗಳನ್ನು ಕಿತ್ತು ಹಾಕಿ, ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದಾರೆ.
ಹೌದು! ಎಪಿಎಂಸಿ ಯಾರ್ಡ್ಗೆ ಬಂದು ದರ ವಿಚಾರಿಸುತ್ತಿದ್ದಂತೆ ರಾಶಿ ರಾಶಿ ಹೂವನ್ನು ಬೇಸರದಲ್ಲಿ ಅಲ್ಲಿಯೇ ಬಿಸಾಡಲಾಗುತ್ತಿದೆ. ಸಾಗಾಣೆ ವೆಚ್ಚವೂ ಸಿಗದಿರುವ ಲೆಕ್ಕಾಚಾರದಲ್ಲಿ ಟ್ರ‍್ಯಾಕ್ಟರ್‌ಗಳನ್ನು ಓಡಿಸಿ, ಗಿಡಗಳನ್ನು ಕಿತ್ತು ಹಾಕಲಾಗುತ್ತಿದೆ. ಕಳೆದ 10 ದಿನಗಳಿಂದಲೂ ನಿರಂತರ ಕುಸಿತದಿಂದ ಹೂವಿನ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.
ಹಿಂದೆ 160 ರಿಂದ 180 ರೂಗಳಿಗೆ ಮಾರಾಟವಾಗುತ್ತಿದ್ದ ಕೆ.ಜಿ.ಗುಲಾಬಿ ಹೂವಿನ ದರವು ಪ್ರಸ್ತುತ ಕನಿಷ್ಠ 30 ರೂಗಳಿಗೆ, 70 ರೂಗಳಿಂದ ಚೆಂಡೂ ಹೂವಿನ ದರವು 5 ರಿಂದ 10 ರೂಗಳಿಗೆ ಕುಸಿದಿದೆ. ಮಾರುಕಟ್ಟೆಗೆ ಹೆಚ್ಚಿನ ಇಳುವರಿ ಪೂರೈಕೆಯ ನಡುವೆ ಬೇಡಿಕೆ ಇಲ್ಲ. ಇದರಿಂದ ಹಲವೆಡೆ ಗುಲಾಬಿ, ಚಾಮಂತಿ, ಚೆಂಡೂ ಹೂವು ಸೇರಿ ನಾನಾ ಹೂವುಗಳು ತೋಟದಲ್ಲಿಯೇ ಬಾಡುತ್ತಿವೆ. ಇವುಗಳನ್ನು ಪ್ರತಿನಿತ್ಯ ಕಿತ್ತು ಬಿಸಾಡಿರುವ ರೈತರು ಅಸಮಾಧಾನದಲ್ಲಿ ಪರ್ಯಾಯ ಬೆಳೆಗಳ ಮೊರೆ ಹೋಗಿದ್ದಾರೆ.
*ಜೆಸಿಬಿಯಲ್ಲಿ ನಾಶ
ಚಿಕ್ಕಬಳ್ಳಾಪುರ ತಾಲೂಕಿನ ಜಾತಾವರದ ವೆಂಕಟೇಶ್ ಎಂಬುವರು ಜಮೀನಿನಲ್ಲಿ ಬೆಳೆದಿದ್ದ ಚಾಮಂತಿ, ಚೆಂಡು ಹೂವಿನ ಬೆಳೆಯನ್ನು ನಾಶಪಡಿಸಿದ್ದಾರೆ. ಲಕ್ಷಾಂತರ ರೂ ಬಂಡವಾಳ ಹೂಡಿ, ಹೂವನ್ನು ಬೆಳೆಯಲಾಗಿತ್ತು. ಉತ್ತಮ ನಿರ್ವಹಣೆಯಿಂದ ಚೆನ್ನಾಗಿ ಇಳುವರಿ ಸಹ ಸಿಗುತ್ತಿತ್ತು. ಆದರೆ, ಈಗ ಒಳ್ಳೆಯ ದರಕ್ಕೆ ಕೇಳುವವರೇ ಇಲ್ಲ. ನಿರ್ವಹಣೆ ವೆಚ್ಚ ಹೋಗಲಿ, ಈಗ ಮಾರುಕಟ್ಟೆಗೆ ಉತ್ಪನ್ನ ಸಾಗಾಣೆ ವೆಚ್ಚವು ಸಿಗುತ್ತಿಲ್ಲ. ಇದಕ್ಕೆ ತೋಟದಲ್ಲಿಯೇ ಬಿಟ್ಟು ಹೂವು ಬಾಡಿದರೆ ಬೆಳೆಗಳಿಗೆ ರೋಗ ಬರುವ ಆತಂಕದಲ್ಲಿ ವಾಹನವನ್ನು ತಂದು ಗಿಡಗಳನ್ನು ಕಿತ್ತು ಹಾಕಿದ್ದಾರೆ.
*ಬರದ ನಡುವೆ ಒಳ್ಳೆಯ ಇಳುವರಿ
ಜಿಲ್ಲಾದ್ಯಂತ ಮಳೆಯ ಅಭಾವದಿಂದ ಮುಂಗಾರು ಅವಧಿಯಲ್ಲಿ ಕೃಷಿಯಲ್ಲಿ ಭಾರಿ ಹಿನ್ನಡೆ ಸಂಭವಿಸಿದೆ. ಬಿತ್ತನೆಯ ಹಂತದಲ್ಲಿ ಬೆಳೆ ಒಣಗಿ ಹೋಗಿದೆ. ಇದರ ನಡುವೆ ಸಮೃದ್ಧಿ ನೀರು ಲಭ್ಯವಿರುವ ಕೊಳವೆ ಬಾವಿಯನ್ನು ಬೆಳೆಸಿಕೊಂಡು ರೈತರು ಒಳ್ಳೆಯ ಗುಣಮಟ್ಟದ ಹೂವುಗಳನ್ನು ಬೆಳೆದಿದ್ದು ಮಳೆಯ ಅಭಾವ ಮತ್ತು ಬಿಸಿಲಿನ ಹೆಚ್ಚಳಕ್ಕೆ ದೊಡ್ಡ ಗಾತ್ರದಲ್ಲಿ ಹೂವುಗಳ ಅರಳಿದ್ದವು. ಆದರೆ, ಇವುಗಳಿಗೆ ಸೂಕ್ತ ದರ ಸಿಗುತ್ತಿಲ್ಲ.
*ಶ್ರಾವಣದಲ್ಲೂ ಬೇಡಿಕೆ ಕುಸಿತ
ವರಮಹಾಲಕ್ಷಿ÷್ಮ, ಶ್ರಾವಣ ಶನಿವಾರ, ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಹೂವಿನ ದರ ದುಬಾರಿಯಾಗಿರುತ್ತಿತ್ತು. ಆದರೆ, ಈ ಬಾರಿ ಮಾತ್ರ ಇಲ್ಲ. ನಿರಂತರ ಮದುವೆ, ನಾಮಕರಣ, ಧಾರ್ಮಿಕ ಮಹೋತ್ಸವ ಸೇರಿ ಶುಭ ಸಮಾರಂಭಗಳ ಆಚರಣೆಯ ನಡುವೆಯೂ ಹೆಚ್ಚಿಗೆ ಹೂವಿಗೆ ಬೇಡಿಕೆ ಇಲ್ಲ. ಇದರಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟದ ಜತೆಗೆ ರೈತರು ಬ್ಯಾಂಕಿನ ಸಾಲದ ಆತಂಕಕ್ಕೊಳಗಾಗಿದ್ದಾರೆ.
*ಹೂವಿನ ದರವು ನಿರಂತರವಾಗಿ ಕುಸಿಯುತ್ತಿದೆ. ಹೆಚ್ಚಿನ ಬೇಡಿಕೆಯೇ ಇಲ್ಲ. ಗುಣಮಟ್ಟದ ಹೂವಿಗೆ ಕನಿಷ್ಠ ಬೆಲೆ ಸಿಗುತ್ತಿದೆ. ಈ ಬಾರಿ ಸಹ ತುಂಬಾ ನಷ್ಟ ಅನುಭವಿಸುವಂತಾಗಿದೆ.
ಶಶಿಕುಮಾರ್, ಹೂವು ಬೆಳೆಗಾರ, ಅಣಕನೂರು
*ಬೆಲೆ ಕುಸಿತದ ಅಸಮಾಧಾನದಲ್ಲಿ ಮೊದಲು ಮಾರುಕಟ್ಟೆಯಲ್ಲಿ ಹೂವುಗಳನ್ನು ಬಿಸಾಡಲಾಯಿತು. ಬಳಿಕ ತೋಟದಲ್ಲಿಯೇ ಹಾಗೆಯೇ ಬಿಡಲಾಗಿತ್ತು. ಕೊನೆಗೆ ಬೇರೆ ವಿಧಿಯಿಲ್ಲದೇ ಗಿಡಗಳನ್ನು ಕಿತ್ತು ಹಾಕಲಾಗಿದೆ. ನೋಡಿ, ರೈತರ ಪರಿಸ್ಥಿತಿ ಹೀಗಿದೆ.
ಅಂಗರೇಕನಹಳ್ಳಿ ರವಿಕುಮಾರ್, ರೈತ,