

ಮಡಿಕೇರಿ:
ತೋಟಗಾರಿಕೆ ಇಲಾಖೆ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಇತರ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರದಿಂದ (ಜ.24) ಜ. 27ರ ತನಕ ಮಡಿಕೇರಿ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ಶುಕ್ರವಾರ ಅಪರಾಹ್ನ 3 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಈ ಪ್ರದರ್ಶನ ಉದ್ಘಾಟಿಸುವರು. ಜಿಲ್ಲೆಯ ಶಾಸಕರು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. 4 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, 2ಲಕ್ಷಕ್ಕೂ ಅಧಿಕ ಜನ ವೀಕ್ಷಿಸುವ ನಿರೀಕ್ಷೆ ಇದೆ. ಶನಿವಾರದ ನಂತರ ಬೆಳಗ್ಗೆ 8.30ರಿಂದ ರಾತ್ರಿ 8.30ರ ತನಕ ಪ್ರದರ್ಶನ ಇರಲಿದೆ. 35 ಲಕ್ಷ ರೂ. ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರದರ್ಶನದ ಹಿನ್ನೆಲೆಯಲ್ಲಿ ರಾಜಾಸೀಟ್ ಉದ್ಯಾನವನದಲ್ಲಿ ಈಗಾಗಲೇ ಸುಮಾರು 7 ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳು, ಬೆಡ್‌ಗಳಲ್ಲಿ ಸಾಲ್ವಿಯಾ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಾಸ್, ಇಂಪೆಷಿಯನ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ ಸೇರಿದಂತೆ ವಿವಿಧ ಜಾತಿಯ 20 ಸಾವಿರ ಹೂವುಗಳನ್ನು ಬೆಳೆಯಲಾಗಿದೆ.
ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದ ಕಲಾಕೃತಿ ಈ ಬಾರಿಯ ಆಕರ್ಷಣೆಯಾಗಿದ್ದು, 22 ಅಡಿ ಎತ್ತರ, 30 ಅಡಿ ಉದ್ದ, 38 ಅಡಿ ಅಗಲದಲ್ಲಿ ಗುಲಾಬಿ, ಸೇವಂತಿಗೆ, ಆಸ್ಪರ್ ಜಾತಿಯ ಸುಮಾರು 6 ಲಕ್ಷ ಹೂವುಗಳನ್ನು ಬಳಸಿ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರದ ತೋಟಗಾರಿಕೆ ಇಲಾಖೆಯ ಝೇಂಕಾರ ಜೇನು ಬ್ರಾಂಡ್ ಮತ್ತು ಕೂರ್ಗ್ ಹನಿ ಬ್ರಾಂಡ್‌ಗಳ ವಿವಿಧ ಕಲಾಕೃತಿಗಳನ್ನು ರಚಿಸಲಾಗುವುದು. ಇಲ್ಲಿ ಹೂವು ಹಾಗೂ ಜೇನು ಹುಳುಗಳ ಕಲಾಕೃತಿ ನಿರ್ಮಿಸಿ ವಿವಿಧ ಹೂವುಗಳಿಂದ ಅಲಂಕರಿಸಲಾಗುವುದು.
ಯೋಧ, ಪಿರಂಗಿ, ರಾಷ್ಟç ಧ್ವಜ, ವಿಂಟೇಜ್ ಕಾರು ಕಲಾಕೃತಿಯನ್ನೂ ನಿರ್ಮಿಸಿ, ಹೂವುಗಳಿಂದ ಅಲಂಕರಿಸಲಾಗುವುದು. ಚಿಟ್ಟೆಯ ರೆಕ್ಕೆಗಳು, ಪ್ರವೇಶ ದ್ವಾರ, ಪ್ರಾಣಿ ಮುಖದ ಅಲಂಕೃತ ಮುಖಗಳೂ ವಿಶೇಷ ಆಕರ್ಷಣೆ ಆಗಲಿದೆ. ಮಕ್ಕಳಿಗೆ ಮನೋರಂಜನೆ ನೀಡುವ ಬಾರ್ಬಿ ಡಾಲ್, ಡೊರೆಮಾನ್, ಮೋಟು ಪಟ್ಲು ಕಲಾಕೃತಿಗಳು, ಫೋಟೋ ಫ್ರೇಮ್, ಸೆಲ್ಫಿ ಝೋನ್ ಮಾದರಿಗಳ ಕಲಾಕೃತಿ ಕೂಡ ನಿರ್ಮಿಸಲಾಗುತ್ತದೆ.
ವಿವಿಧ ಕ್ಷೇತ್ರಗಳ ಗಣ್ಯರ ಕಲಾಕೃತಿಗಳನ್ನು ಹಣ್ಣು, ತರಕಾರಿಗಳಿಂದ ಕೆತ್ತನೆ ಮಾಡಿ ಪ್ರದರ್ಶನ ಮಾಡಲಾಗುತ್ತದೆ. ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್ ಗಿಡಗಳು, ಇಕೆಬಾನ ಹೂವಿನ ಜೋಡಣೆ ಪ್ರದರ್ಶನ ಏರ್ಪಡಿಸಲಾಗುವುದು. ಒಟ್ಟು 16ಯ ಬಗೆಯ ಹೂವಿನ ಕಲಾಕೃತಿಗಳನ್ನು ರಚಿಸಲು 8ರಿಂದ 10 ಲಕ್ಷದಷ್ಟು ಸಂಖ್ಯೆಯಲ್ಲಿ ಸೇವಂತಿಗೆ, ಆರ್ಕಿಡ್, ಡೆಸ್ಸಿ ಹಾಗೂ ವಿವಿಧ ಹೂವುಗಳನ್ನು ಬಳಸಲಾಗುವುದು.
ವಿವಿಧ ಇಲಾಖೆ, ಏಜೆನ್ಸಿಗಳ 60 ಮಳಿಗೆಗಳನ್ನು ತೆರೆಯಲೂ ಅವಕಾಶ ಕಲ್ಪಿಸಲಾಗಿದೆ. 10 ಮಳಿಗೆಗಳನ್ನು ತೋಟಗಾರಿಕೆ, ಕಾಫಿ ಮಂಡಳಿ, ಕೃಷಿ, ಪಶುಪಾಲನೆ, ಮೀನುಗಾರಿಕೆ, ಹಾಪ್‌ಕಾಮ್ಸ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಇತರ ಇಲಾಖೆಗಳಿಗೆ ಕಾದಿರಿಸಲಾಗಿದೆ. 50 ಮಳಿಗೆಗಳಲ್ಲಿ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಯಂತ್ರೋಪಕರಣಗಳ ಮಾರಾಟ ಮಳಿಗೆ ತೆರೆಯಲಾಗುವುದು.
ರೈತರು ಬೆಳೆದಿರುವ ವಿಶೇಷ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಾಂಬಾರ ಬೆಳೆಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಅತ್ಯುತ್ತಮ ಪ್ರದರ್ಶನಗಳಿಗೆ ಬಹುಮಾನಗಳನ್ನೂ ನೀಡಲಾಗುವುದು. ತೋಟಗಾರಿಕೆಯಲ್ಲಿ ಆಸಕ್ತಿ ಇರುವ ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ಒಣ ಹೂ ಜೊಡಣೆ, ಬಿಡಿ ಹೂಗಳ ಜೋಡಣೆ, ಇಕೆಬಾನ, ರಂಗೋಲಿ ಸ್ಪರ್ಧೆಗಳನ್ನು ರಾಜಾಸೀಟ್ ಒಳಭಾಗದಲ್ಲಿ ಆಯೋಜಿಸಲಾಗುವುದು. ಆಸಕ್ತರು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮೊಬೈಲ್ ಸಂಖ್ಯೆ 94486 13355 ಮೂಲಕ ನೋಂದಾಯಿಸಿಕೊಳ್ಳಬಹುದು.
ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಗೆ 20 ರೂ. ಪ್ರವೇಶ ದರ ನಿಗದಿ ಮಾಡಲಾಗಿದೆ. ಶಾಲಾ ಸಮವಸ್ತçದಲ್ಲಿ ಶಾಲೆಗಳಿಂದ ಆಗಮಿಸುವ ಮಕ್ಕಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ, ಹೆಚ್ಚವರಿ ಎಸ್‌ಪಿ ಸುಂದರ ರಾಜ್, ತೋಟಗಾರಿಕೆ ಇಲಾಕೆ ಉಪ ನಿರ್ದೇಶಕ ಹೆಚ್.ಆರ್. ಯೋಗೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.