

ತುಮಕೂರು: ಶುಕ್ರವಾರದಿಂದ ಮೂರು ದಿನ ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಬಗೆಯ ಪುಷ್ಪರಾಣಿಯರ ಆಗಮನವಾಗಿದ್ದು, ನಗರದ ತೋಟಗಾರಿಕೆ ಇಲಾಖೆ ಆವರಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಫೆ.2ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಮೋಹಕ ಮತ್ತು ಅತ್ಯಾಕರ್ಷಕ ಜಗತ್ತನ್ನೇ ತೆರೆದಿಡುವ ವಿವಿಧ ವರ್ಣಮಯ ಹೂವುಗಳು ನೋಡುಗರನ್ನು ಆಕರ್ಷಿಸಿ ಹೊಸಲೋಕವನ್ನೇ ಸೃಷ್ಟಿಸಿದೆ. ಹೂವಿನಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಕಲಾಕೃತಿ ನೋಡುಗರ ಕಣ್ಣಿಗೆ ತಂಪೆರೆಯುವ ಅವಕಾಶ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನದ ಮೂಲಕ ಕಲ್ಪಿಸಿದೆ. ಘಮ-ಘಮ ಸುವಾಸನೆಗಳಿಂದ ಕೂಡಿರುವ ಪ್ರದರ್ಶನ ವೀಕ್ಷಿಸಲು ಪ್ರವೇಶ ಉಚಿತವಾಗಿದೆ.
ಮೂರು ದಿನ ಬೆಳಗ್ಗೆ 9ರಿಂದ ರಾತ್ರಿ 10ರವೆರೆಗೆ ನಾಗರಿಕರು ಕಣ್ತುಂಬಿಕೊಳ್ಳಬಹುದು, ಇದರ ಜತೆಗೆ ಮೂರು ದಿನಗಳ ಕಾಲ ಕೃಷಿ ತಜ್ಞರು, ವಿಜ್ಞಾನಿಗಳಿಂದ ರೈತರಿಗೆ ತರಬೇತಿ, ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ನಡೆಯಲಿದೆ.
ವಿವೇಕರ ಕಲಾಕೃತಿ: ಪ್ರದರ್ಶನದಲ್ಲಿ ಮೈಸೂರಿನ ಕಲಾವಿದೆ ಗೌರಿ ಅವರು ಸ್ವಾಮಿ ವಿವೇಕಾನಂದರ 15 ಅಡಿ ಉದ್ದ ಮತ್ತು 15 ಅಡಿ ಎತ್ತರದ ಮರಳಿನ ಕಲಾಕೃತಿ ತಯಾರಿಸಿದ್ದಾರೆ. ಎಂದಿನಂತೆ ಯುವಜನರನ್ನು ಆಕರ್ಷಿಸಲು ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ.
ಅಂತದ್ದೇನಿದೆ ಪ್ರದರ್ಶನದಲ್ಲಿ?:
ಗುಲಾಬಿ, ಮಾರಿಗೋಲ್ಡ್, ಕೋಲಿಯಸ್, ಜೀನಿಯಾ, ಕ್ರೈಸಾನ್, ತಮಮ್, ಪೆಟೂನಿಯ, ಆರ್ಕಿಡ್ ಸೆಲೋಷಿಯಾ, ಸಾಲ್ವಿಯ, ಡೆಲಿಯೋ, ಚೆಂಡು ಹೂ, ಸೆಲೋಶಿಯ, ಗೋಲ್ಡನ್‌ಶೆಪ್ಸ್‌ಘಿ, ಬಟನ್ ಹೂ ಸೇರಿ 25ಕ್ಕೂ ಹೆಚ್ಚು ಬಗೆಯ 18 ಸಾವಿರ ಹೂವಿನ ಗಿಡ ಪ್ರದರ್ಶನಕ್ಕಿಡಲಾಗಿದೆ. ತರಕಾರಿ, ಹಣ್ಣುಗಳು, ಕೈತೋಟ, ಛಾವಣಿ ತೋಟ, ಮನೆ ಮುಂದಿನ ಅಲಂಕಾರಿಕ ತೋಟ, ಕುಂಡದಲ್ಲಿ ಬೆಳೆಸಿದ ಅಲಂಕಾರಿಕ ಗಿಡಗಳು, ರೈತರು ಬೆಳೆದಿರುವ ಉತ್ತಮ ತೋಟಗಾರಿಕೆ ಬೆಳೆಗಳ ಉತ್ಪನ್ನ ಪ್ರದರ್ಶನದಲ್ಲಿ ಕಾಣಬಹುದು. ಫಲಪುಷ್ಪ ಪ್ರದರ್ಶನದಲ್ಲಿ ಮಧುವನ ಮಳಿಗೆ ತೆರೆಯಲಾಗಿದ್ದು, ಇದರಲ್ಲಿ ಜೇನು ಕೃಷಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರದರ್ಶನದ ಜತೆಯಲ್ಲಿಯೇ ಸಾಂಸ್ಕೃತಿಕ ರಸದೌತಣ ಏರ್ಪಡಿಸಲಾಗಿದೆ.
ಡಿಸ್ನಿ ಥೀಮ್ ನಿರ್ಮಾಣ: ಫಲಪುಷ್ಪ ಪ್ರದರ್ಶನದ ವಿಶೇಷವಾಗಿ ಸಂಪೂರ್ಣ ಹೂವಿನ ಅಲಂಕೃತ ಡಿಸ್ನಿ (ಕಾರ್ಟೂನ್)ಥೀಮ್. ಬೆಂಗಳೂರಿನ ಕಲಾವಿದರು ಸುಮಾರು 1.8 ಲಕ್ಷ ಹೂ ಬಳಸಿ 30ಅಡಿ ಅಗಲ ಮತ್ತು 20ಅಡಿ ಎತ್ತರದ ಡಿಸ್ನಿ ಥೀಮ್ ನಿರ್ಮಿಸಿದ್ದಾರೆ. ಅಲ್ಲದೇ ಮಕ್ಕಳನ್ನು ಆಕರ್ಷಿಸಲು ವಿವಿಧ ಹೂ ಬಳಸಿ ಪ್ರಾಣಿಗಳ ಕಲಾಕೃತಿ, ಕಾರ್ಟೂನ್‌ಗಳನ್ನು ಅಲಂಕರಿಸಿದ್ದಾರೆ.