

ಹುಬ್ಬಳ್ಳಿ : ದಸರಾಕ್ಕೆ ಹೂವು, ಹಣ್ಣಿನ ದರದಲ್ಲಿ ಸಾಕಷ್ಟು ಏರಿಕೆಯಾಗಿದೆ. ಆದರೂ, ಬೇಡಿಕೆ ಮಾತ್ರ ಕುಸಿದಿಲ್ಲ. ಆಯುಧ ಪೂಜೆ, ವಿಜಯದಶಮಿಗೆ ಹೂವು, ಹಣ್ಣು ಬೇಕೆ ಬೇಕು. ಹೀಗಾಗಿ, ಕೊಳ್ಳುವವರಿಗೆ ದರ ಏರಿಕೆಯ ಬಿಸಿ ತಾಗಿದ್ದರೂ, ಇವುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಕಳೆದ ಅಮವಾಸ್ಯೆ ಮುಂಚೆ ಬಿಳಿ ಸೇವಂತಿಗೆ ಹೂವು 50 ರಿಂದ 60 ರೂ. ಪ್ರತಿ ಕೆಜಿಗೆ ಹೋಲ್ಸೆಲ್ ದರದಲ್ಲಿ ಮಾರಾಟವಾಗುತ್ತಿತ್ತು. ಇದೀಗ ಪ್ರತಿ ಕೆಜಿಗೆ 100 ರಿಂದ 150 ರೂ.ಗೆ ಏರಿಕೆಯಾಗಿದೆ. ಆದರೆ, ಬುಧವಾರದಿಂದ ಏಕಾಏಕಿ ಪ್ರತಿ ಕೆಜಿಗೆ 250 ರಿಂದ 300 ರೂ.ಗೆ ಏರಿದೆ. ಚಂಡು ಹೂವಿನ ದರ ಪ್ರತಿ ಕೆಜಿಗೆ ಕಳೆದ ಕೆಲ ದಿನಗಳಿಂದ 100-150 ರೂ. ಇದ್ದು, ಈಗಲೂ ಅಷ್ಟೇ ಇದೆ. ಪ್ರತಿ ಕೆಜಿಗೆ 500 ರೂ. ಇದ್ದ ಮಲ್ಲಿಗೆ ಹೂವು, ಇದೀಗ 600 ರೂ.ಗೆ ತಲುಪಿದೆ.
ಈ ಮಧ್ಯೆ ಗುಲಾಬಿ ಹೂವಿನ ದರ ನಿರೀಕ್ಷೆ ಮೀರಿ ಏರಿಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. 15 ದಿನಗಳ ಮುಂಚೆ ಪ್ರತಿ ಕೆಜಿಗೆ 30 ರೂ. ಇದ್ದ ಗುಲಾಬಿ ಹೂವು, ಕಳೆದ ಕೆಲ ದಿನಗಳಿಂದ 300, 350, 400 ರೂ.ಗೆ ತಲುಪಿದೆ. ಗುರುವಾರ ಗುಲಾಬಿ ಹೂವು ಪ್ರತಿ ಕೆಜಿಗೆ 300 ರಿಂದ 400 ರೂ.ಗೆ ಮಾರಾಟವಾಗಿದೆ.
ಸುಗಂಧಿ ಹೂವು 100 ರಿಂದ 120 ರೂ. ಪ್ರತಿ ಕೆಜಿಗೆ ಇದ್ದದ್ದು, ಇದೀಗ 200 ರೂ. ದಿಂದ 250 ರೂ.ಗೆ ತಲುಪಿದೆ.
ಧಾರವಾಡ ಜಿಲ್ಲೆಯ ಮಿಶ್ರಿಕೋಟಿ, ಕುರುಬಗಟ್ಟಿ, ಹಿರೇಹೊನ್ನಳ್ಳಿ, ಪಕ್ಕದ ಗದಗ ಜಿಲ್ಲೆ, ರಾಮದುರ್ಗ, ಮುನವಳ್ಳಿ, ಕೆರೂರ, ಬೆಂಗಳೂರು, ಹೊಸೂರು ಅಷ್ಟೇ ಅಲ್ಲದೇ, ಪಕ್ಕದ ತಮಿಳುನಾಡು ಹಾಗೂ ಆಂದ್ರಪ್ರದೇಶದಿಂದಲೂ ಹುಬ್ಬಳ್ಳಿ ಎಪಿಎಂಸಿಗೆ ವಿವಿಧ ತರಹದ ಹೂವುಗಳು ಮಾರಾಟಕ್ಕೆ ಬರುತ್ತವೆ ಎನ್ನುತ್ತಾರೆ ಹುಬ್ಬಳ್ಳಿ ಅಮರಗೋಳ ಎಪಿಎಂಸಿಯ ಹೂವಿನ ಹೋಲ್ಸೆಲ್ ವ್ಯಾಪಾರಸ್ಥರಾದ ಕೇಶವ ಲದ್ವಾ.
ಇದೇ ರೀತಿ ಸೇಬು, ಬಾಳೆಹಣ್ಣು, ದ್ರಾಕ್ಷಿ, ಕಿತ್ತಳೆ ಹಣ್ಣುಗಳ ಬೆಲೆಯಲ್ಲಿಯೂ ಏರಿಕೆಯಾಗಿದೆ. ಅಷ್ಟೇ ಅಲ್ಲ, ಬಾಗಿಲಿಗೆ ತೋರಣ ಕಟ್ಟಲು ಮಾವಿನ ಎಲೆಯ ಐದಾರು ಟೊಂಗಿಯ ಕಟ್ಟಿಗೆ 20 ರೂ. ಪ್ರತಿ ಜೋಡಿ ಬಾಳೆದಿಂಡಿನ ಬೆಲೆ 60 ರಿಂದ 100 ರೂ. ಮೇಲ್ಪಟ್ಟು ಇದೆ.
ಇಷ್ಟೆಲ್ಲ ಬೆಲೆ ಏರಿಕೆ ಇದ್ದರೂ ದಸರಾ ಆಚರಣೆಯ ಸಂಭ್ರಮಕ್ಕೆ ಮಾತ್ರ ಯಾವುದೇ ತೊಡಕು ಆಗಿಲ್ಲ. ಈ ಬಾರಿ ಮಳೆ, ಬೆಳೆ ಸಮರ್ಪಕವಾಗಿರುವುದರಿಂದ ಈ ಸಂಭ್ರಮ ಇನ್ನೂ ಮೂರ್ನಾಲ್ಕು ಪಟ್ಟು ಹೆಚ್ಚಿದೆ. ಮಾರುಕಟ್ಟೆಯಲ್ಲಿ ಜನದಟ್ಟಣೆ ಕಂಡು ಬಂದಿದೆ.