ಕಬ್ಬಿಗೆ ಒಂದೇ ದರ ನಿಗದಿ ಮಾಡಿ

Untitled design(5)
ಹೂವಿನಹಡಗಲಿಯ ತಹಸಿಲ್ ಕಚೇರಿಯಲ್ಲಿ ಗುರುವಾರ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಸಭೆ ನಡೆಯಿತು. ತಹಸೀಲ್ದಾರ್ ಸಂತೋಷ್‌ಕುಮಾರ್, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬೆನ್ನೂರು ಹಾಲೇಶ್, ರೈತರಾದ ಹನುಮಂತಪ್ಪ ಕೋಡಬಾಳ, ಚಂದ್ರಪ್ಪ ಕೋಡಬಾಳ, ಬಸವರಾಜ, ಸುರೇಶ್ ಇತರರಿದ್ದರು.
Published on

ಹೂವಿನಹಡಗಲಿ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಗುರುವಾರ ತಹಸೀಲ್ದಾರ್ ಸಂತೋಷ್‌ಕುಮಾರ್ ಅಧ್ಯಕ್ಷತೆಯಲ್ಲಿ ತಾಲೂಕಿನ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳ ಸಭೆ ನಡೆಯಿತು.

ಕಬ್ಬು ಬೆಳೆಗಾರರಾದ ಮಲ್ಲಜ್ಜಿ ಹಿರಿಯಪ್ಪ, ಹನುಮಂತಪ್ಪ ಕೋಡಬಾಳ ಮಾತನಾಡಿ, ಸಕ್ಕರೆ ಕಾರ್ಖಾನೆಯ ಜವಾಬ್ದಾರಿಯನ್ನು ತಹಸೀಲ್ದಾರ್ ಅವರು ತೆಗೆದುಕೊಳ್ಳಬೇಕು. ಕಳೆದ ವರ್ಷ ಒಂದು ಟನ್‌ಗೆ 2457 ರೂ. ನಿಗದಿ ಮಾಡಲಾಗಿತ್ತು. ವಿಜಯನಗರ ಕಾರ್ಖಾನೆ ಅವರು 2400 ರೂ. ಕೊಟ್ಟಿದ್ದರು. ಉಳಿದ 57 ರೂ. ಬಾಕಿ ಇದ್ದು, ಕೂಡಲೇ ರೈತರಿಗೆ ಪಾವತಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.

ಮೈಲಾರ ಸಕ್ಕರೆ ಕಾರ್ಖಾನೆ ಅವರು ರೈತರಿಗೆ ಹಣ ನೀಡಿದ್ದಾರೆ. ಆದರೆ ವಿಜಯನಗರ ಸಕ್ಕರೆ ಕಾರ್ಖಾನೆ ಅವರು ಇನ್ನೂ ಹಣ ಪಾವತಿಸಿಲ್ಲ. ಒಂದೇ ಪ್ರದೇಶದಲ್ಲಿ ಬೆಳೆದ ಕಬ್ಬಿಗೆ ಬೇರೆ ಬೇರೆ ದರ ನಿಗದಿ ಮಾಡುತ್ತಿದ್ದಾರೆ. ಇಂದಿನ ಬೀಜ, ಗೊಬ್ಬರ ಹಾಗೂ ಕಬ್ಬು ಕಟಾವಿಗೆ ಸಾಕಷ್ಟು ಹಣ ಖರ್ಚಾಗುತ್ತಿದೆ. ಎರಡೂ ಕಾರ್ಖಾನೆಯವರೊಂದಿಗೆ ಚರ್ಚಿಸಿ ದರ ನಿಗದಿ ಮಾಡಬೇಕು. ಟನ್‌ಗೆ 3000 ರೂ. ನೀಡದಿದ್ದರೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮೈಲಾರ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ಜಿ.ಸಂಜೀವ್ ಮಾತನಾಡಿ, ಈ ಕುರಿತು ಮಾಹಿತಿ ಇಲ್ಲ ಎಂದು ಸಭೆಯ ಗಮನಕ್ಕೆ ತಂದರು. ಆಗ ರೈತರು ಮಾಹಿತಿ ಇಲ್ಲದೆ ಸಭೆಗೆ ಯಾಕೆ ಬಂದಿರಿ? ರೈತರ ಕಷ್ಟಗಳು ನಿಮಗೆ ತಿಳಿಯಲ್ಲ. ಅವರು ನಿಮ್ಮ ಮನೆಯ ಆಳು ಮಕ್ಕಳಲ್ಲ ಎಂದು ಗದರಿಸಿದರು.

ವಿಜಯನಗರ ಸಕ್ಕರೆ ಕಾರ್ಖಾನೆ ಎಜಿಎಂ ಮಂಜುನಾಥ ಮಾತನಾಡಿ, ಕಾರ್ಖಾನೆಯಲ್ಲಿ ಕಳೆದ ವಾರ ರೈತರ ಸಭೆ ಕರೆದು ಒಂದು ಟನ್‌ಗೆ 2550 ರೂ. ದರ ನಿಗದಿ ಮಾಡಲಾಗಿದೆ. ಅದಕ್ಕೆ ರೈತರು ಒಪ್ಪಿಗೆ ನೀಡಿಲ್ಲ. ನ.2 ರಂದು ಅಂತಿಮ ದರವನ್ನು ಘೋಷಣೆ ಮಾಡುತ್ತೇವೆ ಎಂದರು. ಆಗ ರೈತರು 57 ರೂ. ಬಾಕಿ ಹಣವನ್ನು ನೀಡಿ ಎಂದಾಗ, ನೀಡಲಾಗದು ಎಂದು ಮಂಜುನಾಥ ಹೇಳಿದ್ದರಿಂದ ವಾಗ್ವಾದ ನಡೆಯಿತು. ಮಧ್ಯೆ ಪ್ರವೇಶಿಸಿದ ತಹಸೀಲ್ದಾರ್ ಸಂತೋಷ್‌ಕುಮಾರ್, ಎರಡೂ ಕಾರ್ಖಾನೆ ಅವರಿಗೆ ದರ ನಿಗದಿ ಮಾಡಲು ಸಭೆ ಕರೆಯಲಾಗಿದೆ. ರೈತರು ಹಾಗೂ ಕಾರ್ಖಾನೆ ಅವರು ಒಂದೊಂದು ದರ ಹೇಳಬಾರದು. ಎರಡೂ ಕಾರ್ಖಾನೆ ಅವರು ದರ ನಿಗದಿ ಮಾಡಿದ ನಂತರ ರೈತರಿಂದ ಕಬ್ಬು ಖರೀದಿಸಬೇಕು. ಅಂತಿಮ ದರ ನಿಗದಿಯಾಗುವರೆಗೂ ಕಬ್ಬು ಖರೀದಿ ಮಾಡುವಂತಿಲ್ಲ ಎಂದು ಸೂಚನೆ ನೀಡಿದರು.

ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬೆನ್ನೂರು ಹಾಲೇಶ್, ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ವಿ.ಬಿ.ಕೊಟ್ರೇಶ್, ರೈತರಾದ ಗಿರಿಯಪ್ಪ, ನಿಂಗಪ್ಪ, ಪರಮೇಶಗೌಡ, ಬಸವರಾಜ, ಸುರೇಶ್, ಬಸವರಾಜ್, ಮಂಜಪ್ಪ, ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net