

ವಿಜಯವಾಣಿ ಸುದ್ದಿಜಾಲ ಉಡುಪಿ
ಮಹಿಷಾಸುರ ಚಾತುರ್ವರ್ಣ ಧರ್ಮಕ್ಕೆ ಸೇರಿದವನಲ್ಲ. ಮಹಿಷ ಮತ್ತು ಚಾಮುಂಡಿ ಮುಖಾಮುಖಿಯೂ ಆಗಿಲ್ಲ. ಭೌಗೋಳಿಕವಾಗಿ ಮಹಿಷಾಸುರನು ಬೌದ್ಧ ಧರ್ಮ ಪ್ರಚಾರಕ ಹಾಗೂ ನಾಡಿನ ಮೂಲ ನಿವಾಸಿಗಳ ಅಸ್ಮಿತೆಯಾಗಿ ಕಂಗೊಳಿಸುವ ಇತಿಹಾಸ ಪುರುಷನಾಗಿದ್ದಾನೆ ಎಂದು ಚಿತ್ರನಟ ಚೇತನ್ ಅಹಿಂಸಾ ಅನಿಸಿಕೆ ವ್ಯಕ್ತಪಡಿಸಿದರು.
ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಸೆಪ್ಟೆಂಬರ್ 21ರಂದು ಆಯೋಜಿಸಿದ್ದ ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ಬಲಿ ಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮುಂತಾದ ಮಹಾರಾಜರನ್ನು ಹೇಯವಾಗಿ ವರ್ಣಿಸಿ ಬೌದ್ಧ ಧರ್ಮ ನಾಶ ಮಾಡುವ ಪಿತೂರಿ ಮಾಡಿದ್ದಾರೆ. ಮಹಿಷಾಸುರ ಎಂದರೆ ಪ್ರಾಣವನ್ನು ರಕ್ಷಿಸುವ ಮಹಾರಕ್ಷಕ. ಅಲ್ಲದೆ, ಮಹಿಷ ಮಂಡಲವನ್ನು ಕಟ್ಟಿ ಬೆಳೆಸಿದ ದೊರೆ ಎಂದರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ ನೆರ್ಗಿ ಮಾತನಾಡಿ, ಮಹಿಷಾಸುರನ ಸ್ಮರಣೆ ಯಾವುದೇ ಧರ್ಮ ಅಥವಾ ಸರ್ಕಾರದ ವಿರುದ್ಧವಲ್ಲ. ಭಾರತೀಯ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎಂದರು.
ಯುವಸೇನೆಯ ಮುಖಂಡರಾದ ಹರೀಶ ಸಲ್ಯಾನ್, ದಯಾಕರ ಮಲ್ಪೆ, ಅರುಣ ಸಾಲ್ಯಾನ್, ಭಗವಾನ್ ಮಲ್ಪೆ, ಪ್ರಶಾಂತ ಬಿ.ಎನ್., ರವಿರಾಜ್ ಲಕ್ಷಿ$್ಮನಗರ, ನವೀನ್ ಬನ್ನಂಜೆ, ಶಶಿಕಾಂತ ನೇಜಾರು, ಸಾಧು ಚಿಟ್ಪಾಡಿ, ವಿನಯ ಕೊಡಕೂರು, ರಾಜೇಶ ಮಲ್ಪೆ, ಅಶೋಕ ನಿಟ್ಟೂರು, ಸುಕೇಶ್ ಪುತ್ತೂರು, ರಾಜೇಶ ಸಂತೆಕಟ್ಟೆ, ಶ್ರವಣ್ ಸಂತೆಕಟ್ಟೆ, ಯಾದವ ಕೊಳ, ಸಂಧ್ಯಾ ತಿಲಕರಾಜ್, ಪೂರ್ಣಿಮಾ, ಪ್ರಮೀಳಾ, ಸುಜಾತಾ ಇತರರಿದ್ದರು.
ಸತೀಶ ಕಪ್ಪೆಟ್ಟು ಸ್ವಾಗತಿಸಿದರು. ಗುಣವಂತ ತೊಟ್ಟಂ ವಂದಿಸಿದರು.
ಹಿಂದು ಪುರಾಣಗಳಲ್ಲಿ ಅವೈಜ್ಞಾನಿಕ ಸಂಗತಿ ಮಂಡಿಸಿ ವೈದಿಕಶಾಹಿ ಮೂಲ ನಿವಾಸಿಗಳ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾರ್ವಭೌಮತ್ವ ಕಸಿದುಕೊಂಡಿದ್ದಾರೆ. ಮನುವಾದಿಗಳು ಪುರಾಣ ಮತ್ತು ಮಹಾಕಾವ್ಯವನ್ನೇ ಇತಿಹಾಸವೆಂದು ಬಣ್ಣಿಸಿ ದಾರಿ ತಪ್ಪಿಸಿದ್ದಾರೆ. | ಚೇತನ್ ಅಹಿಂಸಾ. ಚಿತ್ರನಟ