ದಲಿತರ ಮಹಾ ಅಸ್ಮಿತೆ ಮಹಿಷಾಸುರ

UDP-29-6-Mahishasura
Published on

ಚಿಂತಕ ಜಯನ್​ ಮಲ್ಪೆ ಅಭಿಪ್ರಾಯ

ಪುಷ್ಪಾರ್ಚನೆ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಭಾರತದ ಇತಿಹಾಸವೆಂದರೆ ಮೇಲ್ವರ್ಗದ ಮತ್ತು ದಲಿತರ ನಡುವಿನ ಸಂಘರ್ಷವೇ ಆಗಿದೆ. ಮಹಿಷ ಮಂಡಲದ ಮಹಿಷಾಸುರನು ಈ ನಾಡಿನ ಸಾಂಸ್ಕೃತಿಕ ನಾಯಕ ಹಾಗೂ ದಲಿತರ ಮಹಾ ಅಸ್ಮಿತೆಯಾಗಿದ್ದಾನೆ ಎಂದು ದಲಿತ ಚಿಂತಕ ಜಯನ್​ ಮಲ್ಪೆ ಅಭಿಪ್ರಾಯಪಟ್ಟರು.

ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್​ ಯುವಸೇನೆ ಉಡುಪಿ ಜಿಲ್ಲಾ ಘಟಕ ಭಾನುವಾರ ಆಯೋಜಿಸಿದ್ದ ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಕ್ಕಸನಲ್ಲ, ರಕ್ಷಕ

ಭಾರತದಲ್ಲಿ ಮನುವಾದಿಗಳು ಪುರಾಣ ಮತ್ತು ಮಹಾಕಾವ್ಯಗಳನ್ನು ಇತಿಹಾಸವೆಂದು ಬಣ್ಣಿಸಿ ಇಲ್ಲಿನ ದಲಿತರನ್ನು ದಾರಿತಪ್ಪಿಸಿದ್ದಾರೆ. ವೈದಿಕ ಸಿದ್ಧಾಂತ ವಿರೋಧಿಸುವವರನ್ನು ರಾಕ್ಷಸ ಎಂದು ಬಿಂಬಿಸಲಾಗಿದೆ. ಮಹಿಷಾಸುರ ರಾಕ್ಷಸನಲ್ಲ, ಆತ ಮಹಾರಕ್ಷಕ. ಕತ್ತಲೆಯಿಂದ ಬೆಳಕಿನಡೆಗೆ ದಲಿತರನ್ನು ಮುನ್ನಡೆಸುವುದೇ ಮಹಿಷಾಸುರನ ಪ್ರತಿಸಂಸ್ಕೃತಿ ಹಬ್ಬ ಎಂದರು.

ದಲಿತ ಮುಖಂಡರಾದ ಭಗವಾನ್​, ಸತೀಶ್​ ಕಪ್ಪೆಟ್ಟು, ಪ್ರಸಾದ್​ ಮಲ್ಪೆ, ಅರುಣ್​ ಸಾಲ್ಯಾನ್​, ಸಾಧು ಚಿಟ್ಪಾಡಿ, ಸುಶೀಲ್​ ಕುಮಾರ್​, ರವಿರಾಜ್​ ಲಕ್ಷ್ಮೀ ನಗರ, ವಸಂತ ಅಂಬಲಪಾಡಿ, ಸುಧಾಕರ್​ ನೆರ್ಗಿ, ಯೋಗೀಶ್​ ಮಲ್ಪೆ, ಸುರೇಶ್​ ತೊಟ್ಟಂ, ವಿನಯ ಬಲರಾಮನಗರ, ನಗರಸಭೆ ಮಾಜಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್​ರಾಜ್​, ಪೂರ್ಣಿಮಾ ಸದಾನಂದ, ಪ್ರಮೀಳಾ ಹರೀಶ್​, ವಿನೋದ್​ ಜಯರಾಜ್​, ಚಿತ್ರಾಕ್ಷಿ ಕದಿಕೆ ಇತರರಿದ್ದರು.
ದೀಪಕ್​ ಕೊಡವೂರು ಸ್ವಾಗತಿಸಿದರು. ಗುಣವಂತ ತೊಟ್ಟಂ ವಂದಿಸಿದರು.

ಮುಂದಿನ ವರ್ಷ ಮಹಿಷ ದಸರಾ

ಜಿಲ್ಲಾಧ್ಯಕ್ಷ ಗಣೇಶ್​ ನೆರ್ಗಿ ಮಾತನಾಡಿ, ಈ ಬಾರಿ ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಮಹಿಷಾಸುರನಿಗೆ ಸಾಂಕೇತಿಕವಾಗಿ ಪುಷ್ಪಾರ್ಚನೆ ಕಾರ್ಯಕ್ರಮ ಆಯೋಜಿಸಿದ್ದೇವೆ. ಮುಂದಿನ ವರ್ಷ ಉಡುಪಿ ಜಿಲ್ಲೆಯ ಎಲ್ಲ ಗ್ರಾಮ, ಹೋಬಳಿ ಮಟ್ಟದಲ್ಲಿ ಮಹಿಷಾಸುರ ದಸರಾ ಏರ್ಪಡಿಸುತ್ತೇವೆ ಎಂದು ತಿಳಿಸಿದರು.

ಬಲಿ ಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮುಂತಾದ ಮಹಾರಾಜರನ್ನು ಹೇಯವಾಗಿ ಚಿತ್ರಿಸಲಾಗಿದೆ. ಹೀಗಾಗಿ ದಲಿತರು ಪುರಾಣ ತಿರಸ್ಕರಿಸಿ ಇತಿಹಾಸದ ಮರುವ್ಯಾಖ್ಯಾನಕ್ಕೆ ಮುಂದಾಗುವ ಅನಿವಾರ್ಯತೆ ಹಿಂದಿಗಿಂತ ಇಂದು ಹೆಚ್ಚಿದೆ.| ಹರೀಶ್​ ಸಾಲ್ಯಾನ್​. ಸ್ಥಾಪಕಾಧ್ಯಕ್ಷ, ಅಂಬೇಡ್ಕರ್​ ಯುವಸೇನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net