

ಹೂವಿನಹಡಗಲಿ: ತಾಲೂಕಿನ ಮಕರಬ್ಬಿ ಗ್ರಾಮದ ಕಲ್ಲೇಶ್ವರ ದೇವಸ್ಥಾನ ಆವರಣದಲ್ಲಿ ಈಚೆಗೆ ಕಲ್ಯಾಣ ಚಾಲುಕ್ಯರ ಕಾಲದ ವೀರಗಲ್ಲು ಪತ್ತೆಯಾಗಿದೆ. ಇದನ್ನು ಕನ್ನಡ ವಿಶ್ವವಿದ್ಯಾಲದ ಶಾಸನಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಡಿ.ವೀರೇಶ ಪತ್ತೆ ಮಾಡಿದ್ದಾರೆ.
ವೀರಗಲ್ಲು, 12ನೇ ಶತಮಾನದ ಚಾಲುಕ್ಯರ ಕಾಲದ್ದೆಂದು ಹೇಳಲಾಗುತ್ತಿದ್ದು, ತಾಲೂಕಿನ ಪರಿಸರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಲ್ಯಾಣ ಚಾಲುಕ್ಯರು ಆಳ್ವಿಕೆ ನಡೆಸುತ್ತಿದ್ದಾಗ ವೀರನು ಯುದ್ಧದಲ್ಲಿ ಹೋರಾಡಿ ಮಡಿದಿರಬಹುದಾದ ಸಾಧ್ಯತೆಯಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವೀರಗಲ್ಲು ಏನನ್ನು ಸೂಚಿಸುತ್ತದೆ: ಶಿಲ್ಪದ ದೃಷ್ಟಿಯಿಂದ ಬಹಳ ಅಪರೂಪವಾಗಿದ್ದು, ಮೂರು ಪಟ್ಟಿಕೆಗಳನ್ನು ಒಳಗೊಂಡಿದೆ. ಮೊದಲನೆಯ ಪಟ್ಟಿಕೆಯು ತೃಟಿತವಾಗಿದ್ದು, ಕಪ್ಪು ಬಳಪದ ಶಿಲೆಯಲ್ಲಿ ಕಂಡರಿಸಲಾಗಿದೆ. ಧನುರ್ಧಾರಿ ವೀರನು ಆಲಿಡಭಂಗಿಯಲ್ಲಿ ಶತ್ರುಗಳ ವಿರುದ್ಧ ಹೋರಾಡುತ್ತಿದ್ದಾನೆ. ಆತನ ಪರಿವಾರದಲ್ಲಿ ಕಾಲ್ದಳದವರಿದ್ದಾರೆ. ವೀರನ ಮುಂಭಾಗದಲ್ಲಿರುವ ವೃಕ್ಷದ ಚಿತ್ರವು ಪ್ರಶ್ನಾರ್ಥಕವಾಗಿದೆ. ಮುಂದಿನ ಭಾಗವು ಒಡೆದು ಹೋಗಿದೆ. ಮಧ್ಯದ ಪಟ್ಟಿಕೆಯಲ್ಲಿ ವೀರಮರಣ ಹೊಂದಿದ ಧನುರ್ಧಾರಿ ಯೋಧನನ್ನು ಅಪ್ಸರೆಯರಿಬ್ಬರು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಸುರಲೋಕದತ್ತ ಹಾರುತ್ತಿರುವ ಚಿತ್ರಣವಿದೆ. ಜತೆಗೆ ಎರಡು ಪದ್ಮ ಕಮಲಗಳ ಚಿತ್ರಣವಿದೆ. ಅಗ್ರಫಲಕದ ಎಡಭಾಗದಲ್ಲಿ ಅಂಜಲಿ ಮುದ್ರೆಯಲ್ಲಿ ಕುಳಿತ ವೀರ, ಶಿವಲಿಂಗಾರ್ಚನೆ ಮಾಡುತ್ತಿರುವ ಶೈವ ಪಂಡಿತ, ಶಿವಲಿಂಗ, ನಂದಿ, ಸೂರ್ಯ, ಚಂದ್ರರ ಚಿತ್ರಣವಿರುವುದರ ಬಗ್ಗೆ ತಿಳಿಸುತ್ತಾರೆ. ಒಟ್ಟಾರೆ ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ವೀರನ ಬಗ್ಗೆ ತಿಳಿಸುತ್ತದೆ.
ವೀರಗಲ್ಲು ದೊರೆತಿರುವುದು ಆ ಕಾಲದಲ್ಲಿ ಆಳ್ವಿಕೆ ಮಾಡಿದವರ ಕುರುವು. ಈ ಭಾಗದಲ್ಲಿ ಸಂಶೋಧನೆ ಕೈಗೊಂಡರೆ ಇನ್ನು ಅನೇಕ ರೀತಿಯ ಸ್ಮಾರಕಗಳು ದೊರಕುವ ಸಾಧ್ಯತೆಗಳಿವೆ. ದೊರೆದ ಸ್ಮಾರಕಗಳ ಇತಿಹಾಸ ಸಂಶೋಧಿಸಿ, ಅವು ದೊರೆತಿರುವ ಸ್ಥಳದಲ್ಲೇ ಸಂರಕ್ಷಿಸಿ ನಂತರ ಹೆಚ್ಚಿನ ಅಧ್ಯಯನದಲ್ಲಿ ತೊಡಗಬಹುದಾಗಿದೆ. ಈ ರೀತಿ ಮಾಡುವುದರಿಂದ ಅಲ್ಲಿನ ಜನರಿಗೆ ತಮ್ಮ ಗ್ರಾಮಗಳ ಇತಿಹಾಸ ತಿಳಿಯುವ ಜತೆಗೆ ಇತಿಹಾಸ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ.
> ಡಾ.ಅಮರೇಶ ಯತಗಲ್,
ಪ್ರಾಧ್ಯಾಪಕ, ಶಾಸನಶಾಸ್ತ್ರ ವಿಭಾಗ, ಕವಿವಿ ಹಂಪಿ