

ಹೂವಿನಹಡಗಲಿ: ಖಾತ್ರಿ ಯೋಜನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನರೇಗಾ ಸ್ತ್ರೀ ಚೇತನ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ವೀರಣ್ಣನಾಯ್ಕ ಹೇಳಿದರು.
ತಾಲೂಕಿನ ಕುರುವತ್ತಿ ಗ್ರಾಪಂ ವ್ಯಾಪ್ತಿಯ ಕುರುವತ್ತಿ ಪ್ಲಾಟ್‌ನ ದೊಡ್ಡ ಕಟ್ಟೆಯಲ್ಲಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿಕಾರರಿಗೆ ಆರೋಗ್ಯ ತಪಾಸಣಾ ಶಿಬಿರ ಮತ್ತು ಉದ್ಯೋಗ ಚೀಟಿ ಪರಿಷ್ಕರಣೆ ಹಾಗೂ ಸ್ತ್ರೀ ಚೇತನ ಅಭಿಯಾನ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಕೂಲಿಕಾರರು ಬೇಸಿಗೆ ಸಂದರ್ಭದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ನರೇಗಾ ಯೋಜನೆ ಅಡಿಯಲ್ಲಿ ಏ.1 ರಿಂದ ಪ್ರತಿ ದಿನಕ್ಕೆ ಕೂಲಿಕಾರರಿಗೆ 370 ರೂ.ಗಳ ಕೂಲಿ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರೈತರ ಹೊಲಗಳಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಯದ ಕಾರಣ ಎರಡು ತಿಂಗಳು ನಿರಂತರವಾಗಿ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತದೆ. ಈ ಎರಡು ತಿಂಗಳು ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಕೆಲಸದಲ್ಲಿ ಶೇ.30 ರಿಯಾಯಿತಿ ನೀಡಲಾಗಿದೆ. ಹಿರಿಯ ನಾಗರಿಕ ಮತ್ತು ಅಂಗವಿಕಲರಿಗೆ ಕೆಲಸದ ಅಳತೆಯ ಪ್ರಮಾಣದಲ್ಲಿ ಶೇ.50 ರಿಯಾಯಿತಿ ನೀಡಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಕುಂಚೂರು ಭರಮಣ್ಣ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಗುತ್ತೆಪ್ಪ ತಳವಾರ, ವೈದ್ಯಾಧಿಕಾರಿಗಳಾದ ಚನ್ನಪ್ಪ ನಾಯಕ್, ಬಸವಂತಪ್ಪ ಎಸ್., ಐಸಿಟಿ ಸಂಯೋಜನಾಧಿಕಾರಿ ಪ್ರಕಾಶ್ ನಾಯಕ್, ಸಿಬ್ಬಂದಿ ರವಿಕುಮಾರ್, ನರೇಶ್, ಶಿವರಾಜ್, ಅನುಷಾ ಹಾಗೂ ಆಶಾ ಕಾರ್ಯಕರ್ತರು, ನರೇಗಾ ಕೂಲಿ ಕಾರ್ಮಿಕರು ಇತರರಿದ್ದರು.