

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮಾರುಕಟ್ಟೆಗೆ ಬೆಂಗಳೂರು ಸುತ್ತಲಿನ ಹೂವು ಆಗಮಿಸಿದ್ದು, ಸ್ಥಳೀಯ ಹೂವು ಮಾರಾಟಗಾರರ ಆಕ್ರೋಶಕ್ಕೆ ಕಾರಣವಾಯಿತು.
ಬುಧವಾರ ಮಹಾಲಯ ಅಮವಾಸ್ಯೆ ಇರುವುದರಿಂದ ಸ್ಥಳೀಯ ಹೂವುಗಳಿಗೆ ಬೇಡಿಕೆ ಇರುತ್ತದೆ. ಆದರೆ, ಬೆಂಗಳೂರು ಸುತ್ತಮುತ್ತ ಬೆಳೆಯುವ ಡೈಸಿ ಹೂವು, ಗುಲಾಬಿ, ಸಂಪಿಗೆ, ಡೇರೆ, ಸುಗಂಧರಾಜ ಸೇರಿ ವಿವಿಧ ಬಗೆಯ ಹೂವು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದರಿಂದ ಸ್ಥಳೀಯ ಹೂವು ವ್ಯಾಪಾರಸ್ಥರು ಬೆಳೆದ ಚೆಂಡುಹೂವು, ಸಂಪಿಗೆ, ಗುಲಾಬಿ ಮಾರಾಟವಾಗುತ್ತಿಲ್ಲ ಎಂದು ಸ್ಥಳೀಯ ಮಾರಾಟಗಾರರು ವಿರೋಧ ವ್ಯಕ್ತಪಡಿಸಿದರು.
5- 6 ತಿಂಗಳು ಗೊಬ್ಬರ, ನೀರು ಕೊಟ್ಟು ಹೂ ಬೆಳೆದಿದ್ದೇವೆ. ಕೆಜಿ ಹೂವು 20ರಿಂದ 30 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಸ್ಥಳೀಯ ರೈತರಿಗೆ ತೊಂದರೆಯಾಗುತ್ತಿದೆ. ಅನ್ಯಜಿಲ್ಲೆಗಳ ಹೂವು ನಗರ ಮಾರುಕಟ್ಟೆಗೆ ಆಗಮಿಸದಂತೆ ತಡೆದು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.