

ಜಿ.ನಾಗರಾಜ್, ಬೂದಿಕೋಟೆ
ಲಾಕ್‌ಡೌನ್ ತೆರವಿನಿಂದ ಚೆಂಡು ಹೂವಿಗೆ ಬೇಡಿಕೆಯೊಂದಿಗೆ ಬಂಗಾರದ ಬೆಲೆ ಬಂದಿದ್ದು, ಹೂವಿನ ವ್ಯಾಪಾರಿಗಳು ರೈತರ ತೋಟಗಳಿಗೆ ಮುಗಿ ಬೀಳುತ್ತಿದ್ದಾರೆ.
ರಾಜ್ಯದಲ್ಲಿ ಕರೊನಾ ಭೀತಿಯಿಂದ ಸಭೆ-ಸಮಾರಂಭ, ಮದುವೆ-ಮುಂಜಿಗಳಿಗೆ ನಿರ್ಬಂಧ ಹೇರಲಾಗಿತ್ತು. ಎಲ್ಲ ದೇವಸ್ಥಾನಗಳನ್ನೂ ಮುಚ್ಚಿದ್ದ ಕಾರಣ ಚೆಂಡು ಹೂವನ್ನು ಕೇಳುವವರಿಲ್ಲದೆ, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ರೈತರು ನಾಶಪಡಿಸಿದ್ದರು. ಇದರಿಂದ ಹಾಕಿದ ಬಂಡವಾಳವೂ ಕೈ ಸೇರದೆ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿತ್ತು. ಇದೀಗ ಲಾಕ್‌ಡೌನ್ ತೆರವಿನಿಂದ ದೇವಸ್ಥಾನ ತೆರೆಯಲಾಗಿದ್ದು, ಮದುವೆ ಹಾಗೂ ಇತರ ಶುಭ ಸಮಾರಂಭಗಳಿಗೆ ಅವಕಾಶ ಕಲ್ಪಿಸಿರುವ ಕಾರಣ ಹೂವಿಗೆ ಬೇಡಿಕೆ ಹೆಚ್ಚಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಹೂವುಗಳ ಬೆಲೆ ಪಾತಾಳಕ್ಕೆ ಕುಸಿದಿದ್ದು, ಚೆಂಡು ಹೂವಿನ ಬೆಲೆ ಕೆಜಿಗೆ 5ರಿಂದ 10 ರೂಗೆ ಮಾರಾಟವಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಸಾಕಷ್ಟು ರೈತರು ಹೂವಿನ ತೋಟಕ್ಕೆ ಟ್ರ್ಯಾಕ್ಟರ್ ಹಚ್ಚಿ ನಾಶ ಮಾಡಿದರೆ. ಇನ್ನೂ ಕೆಲವರು ಹೂವನ್ನು ಬೆಳೆಯಲು ಹಿಂದೇಟು ಹಾಕಿದ ಕಾರಣ ಬೇಡಿಕೆಗೆ ಅನುಗುಣವಾಗಿ ಹೂಗಳು ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಬೇಡಿಕೆ ಹೆಚ್ಚಾಗಿದ್ದು, ಹೂವು ಇರುವ ರೈತರ ತೋಟಗಳಿಗೆ ವ್ಯಾಪಾರಿಗಳು ತೆರಳಿ ಅಲ್ಲೇ ಖರೀದಿಗೆ ಮುಂದಾಗಿದ್ದಾರೆ. ಪ್ರತಿ ಕೆಜಿ ಹೂವನ್ನು 80ರಿಂದ 100 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. ಇಲ್ಲಿಂದ ಪಡೆದ ಹೂವನ್ನು ತಮಿಳುನಾಡು, ಕೇರಳ, ಆಂಧ್ರ ಸೇರಿ ಇತರ ರಾಜ್ಯಗಳಿಗೆ ರಪ್ತು ಮಾಡಲಾಗುತ್ತಿದೆ.
ಲಾಕ್‌ಡೌನ್ ಸಮಯದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದು ಬೆಲೆ ಇಲ್ಲದ ಕಾರಣ ಲಕ್ಷಾಂತರ ರೂ. ನಷ್ಟ ಉಂಟಾಗಿತ್ತು. ಈಗ ಒಂದು ಎಕರೆಯಲ್ಲಿ ಚೆೆಂಡು ಹೂ ಬೆಳೆಯಲಾಗಿದ್ದು, ಹೂವಿಗೆ ಉತ್ತಮ ಬೆಲೆ ಹಾಗೂ ಬೇಡಿಕೆ ಇದ್ದು ಹಾಕಿದ ಬಂಡವಾಳದೊಂದಿಗೆ ಆದಾಯವೂ ಬರುವ ನಿರೀಕ್ಷೆ ಇದೆ. ಸಿದ್ದೇಗೌಡ, ಮಾರಾಂಡಹಳ್ಳಿ ರೈತ ಲಾಕ್‌ಡೌನ್ ತೆರವಿನಿಂದ ಚೆಂಡು ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಬೂದಿಕೋಟೆ ಹೋಬಳಿಯಿಂದ ಪ್ರತಿ ದಿನ ಎರಡು ಟನ್‌ನಷ್ಟು ಚೆಂಡು ಹೂ ತಮಿಳುನಾಡಿನ ಕನ್ಯಾಕುಮಾರಿ, ರಾಮೇಶ್ವರಂ ಸೇರಿ ಇತರ ಮಾರುಕಟ್ಟೆಗಳಿಗೆ ರಪ್ತು ಮಾಡಲಾಗುತ್ತಿದ್ದು, ಉತ್ತಮ ಬೆಲೆ ಸಿಗಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ. ಕಾಂತರಾಜು, ಹೂವಿನ ವ್ಯಾಪಾರಿ, ರಾಯಕೋಟೆ