

ಹುಬ್ಬಳ್ಳಿ : ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ. ಆದರೂ ಎನ್ಡಿಎ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಈ ಮೂರೂ ಕ್ಷೇತ್ರಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಚಿವರನ್ನು ಇರಿಸಿದೆ. ಹಣದ ಹೊಳೆ ಹರಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ನವರು ಬಹಳ ಭ್ರ್ರುನಿರಸರಾಗಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಮಶಿನರಿ ಉಪಯೋಗಿಸಿಕೊಂಡು ದುಡ್ಡು ಹಂಚುತ್ತಿದ್ದಾರೆ. ಆದರೆ, ಇದನ್ನೆಲ್ಲ ಮೀರಿ ಎನ್ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಪ್ರಲ್ಹಾದ ಜೋಶಿ ಹೇಳಿದರು.
ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಎಲ್ಲೆಡೆಯೂ ಕಾಂಗ್ರೆಸ್ ಮಂತ್ರಿ ಮಂಡಲವೇ ಬೀಡು ಬಿಟ್ಟಿದೆ. ಇದರಿಂದಲೇ ಗೊತ್ತಾಗುತ್ತದೆ ಸೋಲುವ ಭಯದಲ್ಲಿ ಏನೇನು ತಂತ್ರ ಹೆಣೆದಿದ್ದಾರೆ, ಅದೆಷ್ಟು ಹಣ ಚೆಲ್ಲುತ್ತಿದ್ದಾರೆ ಎಂಬುದು ಎಂದು ಜೋಶಿ ಹೇಳಿದರು.