

ನೆಲಮಂಗಲ: ಲಾಕ್‌ಡೌನ್‌ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಪೊಲೀಸ್, ಆರೋಗ್ಯ ಇಲಾಖೆ ಮತ್ತು ಆಶಾಕಾರ್ಯಕರ್ತೆಯರ ಸೇವೆ ಸ್ಮರಣೀಯ ಹಾಗೂ ಅಭಿನಂದನಾರ್ಹ ಎಂದು ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರಮಠದಲ್ಲಿ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಕರ್ತವ್ಯ ನಿರತ ಪೊಲೀಸ್, ಆರೋಗ್ಯ ಇಲಾಖೆ ಮತ್ತು ಆಶಾಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರ ಕಾಯಕ ತತ್ವದಂತೆ ಸ್ವಾರ್ಥಕ್ಕಾಗಿ ದುಡಿಯದೇ ಜಗತ್ತಿನ ಉದ್ಧಾರಕ್ಕೆ ಮಾಡುವುದು ನಿಜವಾದ ಕಾಯಕ. ಕುಟುಂಬಗಳನ್ನು ಬದಿಗೊತ್ತಿ ಕರೊನಾ ವೈರಸ್ ಹರಡದಂತೆ 24 ಗಂಟೆಗಳ ಕಾಲ ಶ್ರಮಿಸಿದ ಪ್ರತಿಯೊಬ್ಬರ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ ಮಾತನಾಡಿ, ಲಾಕ್‌ಡೌನ್‌ನ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯ ಅವಿಸ್ಮರಣೀಯ ಕಾರ್ಯವನ್ನು ಗುರುತಿಸುವ ಮಾದರಿ ಕಾರ್ಯ ಮಠದಿಂದ ಆಗಿದೆ ಎಂದರು.
ಬೃಹತ್ ಗಾತ್ರದ ಬಸವಣ್ಣನವರ ಭಾವಚಿತ್ರಕ್ಕೆ ಶ್ರೀಸಿದ್ಧಲಿಂಗಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.
ತಹಸೀಲ್ದಾರ್ ಎಂ.ಶ್ರೀನಿವಾಸಯ್ಯ, ಬಿಇಒ ಕೆ.ಸಿ.ರಮೇಶ್, ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ, ತಾಲೂಕು ಅ.ಭಾ.ವೀ.ಮಹಾಸಭಾ ಅಧ್ಯಕ್ಷ ಎನ್.ಎಸ್.ಶಾಂತಕುಮಾರ್, ನಿರ್ದೇಶಕ ರೇವಣಸಿದ್ದಯ್ಯ, ಖಜಾಂಚಿ ಸಿ.ಎಸ್.ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ವೇದಾವತಿ, ಹೋಬಳಿ ಅಧ್ಯಕ್ಷ ಮರುಳಸಿದ್ದಯ್ಯ, ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಪರಮೇಶ್, ನಗರಸಭೆ ಸದಸ್ಯರಾದ ಸಿ.ಪ್ರದೀಪ್, ಎನ್.ಗಣೇಶ್, ಎನ್.ಎಸ್.ಪೂರ್ಣಿಮಾ, ಗ್ರಾಪಂ ಸದಸ್ಯ ಎಚ್.ಡಿ.ಹರ್ಷ, ಮುಖಂಡರಾದ ಎಚ್.ಜೆ.ಸತೀಶ್‌ಕುಮಾರ್, ಮೃತ್ಯುಂಜಯ, ರಾಜಮ್ಮ, ಸ್ವಯಂಸೇವಕರಾದ ಬಿ.ರುದ್ರಸ್ವಾಮಿ, ಶೀಲಾಶಿವಶಂಕರ್, ಪುನೀತ್‌ರಾಜ್, ಗಣೇಶ್ ಇತರರಿದ್ದರು.
ವಿಶಿಷ್ಟವಾಗಿ ಜಯಂತಿ ಆಚರಣೆ: ಪ್ರತಿವರ್ಷ ಪಟ್ಟಣದೆಲ್ಲೆಡೆ ಆಶ್ವಾರೂಢ ಬಸವೇಶ್ವರ ಉತ್ಸವಮೂರ್ತಿ ಮೆರವಣಿಗೆ ಜತೆ ಗಣ್ಯರೊಬ್ಬರಿಗೆ ಪವಾಡಶ್ರೀ ಪ್ರಶಸ್ತಿ ಪ್ರದಾನಮಾಡಿ ವಿಜೃಂಭಣೆಯಿಂದ ಬಸವಜಯಂತಿ ಆಚರಿಸಲಾಗುತ್ತಿತ್ತು. ಈ ಬಾರಿ ಲಾಕ್‌ಡೌನ್ ಆಗಿರುವುದರಿಂದ ಸಾಂಕೇತಿಕ ಹಾಗೂ ಸರಳವಾಗಿ ಆಚರಿಸಲಾಯಿತು. ಮಠದ ಸ್ವಯಂಸೇವಕರು ಕರೊನಾ ವಾರಿಯರ್ಸ್‌ಗೆ ಹೂವಿನ ಮಳೆಗೆರೆದರು. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು.