

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶ, ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳಗಳ ನೀರಿನ ಮಟ್ಟ ಏರಿಕೆ ಕಂಡಿದೆ. ಮತ್ತೊಂದೆಡೆ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಜಲಾವೃತಗೊಂಡಿವೆ. ನಗರ ಪ್ರದೇಶಗಳ ವಿವಿಧೆಡೆ 10ಕ್ಕೂ ಅಧಿಕ ಮರಗಳು ಬಿದ್ದಿವೆ.
ಬೆಳಗಾವಿ ನಗರ, ಗ್ರಾಮೀಣ ಮತ್ತು ಖಾನಾಪುರ ತಾಲೂಕಿನ ವ್ಯಾಪ್ತಿ ಪ್ರದೇಶಗಳಲ್ಲಿ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ ಮತ್ತು ಬಳ್ಳಾರಿ ನಾಲಾದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಮತ್ತೊಂದೆಡೆ ಖಾನಾಪುರ ತಾಲೂಕಿನಲ್ಲಿ ಮನೆಗಳು ಕುಸಿದಿವೆ. ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ, ಮೂಡಲಗಿ, ಬೆಳಗಾವಿ ಇತರ ತಾಲೂಕುಗಳಲ್ಲಿ ಹಾನಿ ಸಂಭವಿಸಿದೆ.
ಜಲಾಶಯಗಳ ಒಳ ಹರಿವು ಹೆಚ್ಚಳ: ಕಳೆದ 24 ಗಂಟೆಗಳ ಅವಧಿಯಲ್ಲಿ ಹಿಡಕಲ್ ಡ್ಯಾಂಗೆ 12,856 ಕ್ಯೂಸೆಕ್‌ನಷ್ಟು ನೀರು ಹಾಗೂ ಸವದತ್ತಿ ತಾಲೂಕಿನ ನವೀಲುತೀರ್ಥ ಡ್ಯಾಂಗೆ 4,326 ಕ್ಯೂಸೆಕ್ ನೀರು ಹರಿದು ಬಂದಿದೆ. ಮತ್ತೊಂದೆಡೆ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ರಕ್ಕಸಕೊಪ್ಪ ಜಲಾಶಯ ಅರ್ಧ ಭರ್ತಿಯಾಗಿದೆ.
ಅವಾಂತ ಸೃಷ್ಟಿ: ಬೆಳಗಾವಿ ಮಹಾನಗರದಲ್ಲಿ ಶಹಾಪುರ, ಗಾಂಧಿನಗರ, ಎಪಿಎಂಸಿ ಯಾರ್ಡ್, ವಡಗಾಂವ, ಶಹಾಪುರ, ಹಳೇ ಪಿ.ಬಿ. ರಸ್ತೆ, ಯಳ್ಳೂರು, ಸಾಯಿನಗರ, ನೇಕಾರ ಕಾಲೊನಿ, ಸಂಭಾಜಿ ನಗರ ಗಣೇಶ ಕಾಲನಿ, ಸಮರ್ಥ ನಗರ, ಜ್ಞಾನೇಶ್ವರನಗರ ಸೇರಿದಂತೆ ವಿವಿಧ ಕಡೆ ಜನವಸತಿ ಪ್ರದೇಶಗಳಲ್ಲಿ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಕೆಲ ಭಾಗದಲ್ಲಿ ಚರಂಡಿ ಬ್ಲಾಕ್ ಆಗಿ ರಸ್ತೆ ಮೇಲೆ ನೀರು ಹಿರಿದು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮಳೆ, ಪ್ರವಾಹ ಸ್ಥಿತಿಗತಿ ಪರಿಶೀಲಿಸಿದ ಜಿಪಂ ಸಿಇಒ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಮಂಗಳವಾರ ಖಾನಾಪುರ ತಾಲೂಕಿನ ವಿವಿಧೆಡೆ ಜಿಪಂ ಸಿಇಒ ರಾಹುಲ ಶಿಂಧೆ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಮಳೆ ಹಾಗೂ ಪ್ರವಾಹದ ಸ್ಥಿತಿಗತಿ ಅವಲೋಕಿಸಿದರು. ಇದ್ದಲಹೊಂಡ ಗ್ರಾಪಂ ವ್ಯಾಪ್ತಿಯ ಇದ್ದಲಹೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾನಾಪುರ-ಗೋವಾ ರಸ್ತೆಯಲ್ಲಿರುವ ಹಾಲಾತ್ರಿ ಹಳ್ಳದ ಪ್ರವಾಹ ಸ್ಥಿತಿಗತಿ ಹಾಗೂ ಸೇತುವೆ ವೀಕ್ಷಿಸಿದರು. ಪಾಂಡರಿ ನದಿ ಪ್ರವಾಹದಿಂದ ಮುಳುಗಡೆಯಾಗುವ ಲೋಂಡಾ ಗ್ರಾಪಂ ವ್ಯಾಪ್ತಿಯ ಗಾಂಧಿನಗರದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಇಒ ರಾಹುಲ್ ಶಿಂಧೆ ಸೂಚಿಸಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ್, ಡಿಡಿಪಿಐ ಲೀಲಾವತಿ ಹಿರೇಮಠ, ಇಒ ರಮೇಶ ಮೇತ್ರಿ ಇತರರಿದ್ದರು. ನಾಲಾ, ಚರಂಡಿ ಸ್ವಚ್ಛತೆಗೆ ಸೂಚನೆ:ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ವಿವಿದೆಡೆ ಉಂಟಾಗಿರುವ ಹಾನಿ, ಚರಂಡಿ ಬ್ಲಾಕ್ ಸೇರಿ ವಿವಿಧ ಸಮಸ್ಯೆಗಳ ಕುರಿತು ಪಾಲಿಕೆ ಆಯುಕ್ತೆ ಶುಭ ಬಿ. ಮಂಗಳವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ, ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗದಂತೆ ಚರಂಡಿ, ನಾಲಾಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಸಿಬ್ಬಂದಿಗೆ ಸೂಚಿಸಿದರು.
ಮಂಗಳವಾರ ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಬೆಳಗಾವಿ ನಗರ ಮತ್ತು ಖಾನಾಪುರ ತಾಲೂಕಿನ ಶಾಲೆ ಹಾಗೂ ಕಾಲೇಜುಗಳಿಗೆ ಒಂದು ದಿನ ರಜೆ ಘೋಷಣೆ ಮಾಡಿದೆ. ಅಲ್ಲದೇ, ಕೃಷ್ಣಾ, ಘಟಪ್ರಭಾ ನದಿ ದಡದ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಕೋಪ ಪರಿಹಾರ ಪಡೆಯ ಸಿಬ್ಬಂದಿ ನಿಯೋಜಿಸಲಾಗಿದೆ.