ಪ್ರವಾಹ ಪ್ರಮಾಣ ಹೆಚ್ಚಾಗಬಹುದು

Flooding may increase
Flooding may increase
Published on

ಜಮಖಂಡಿ: ಕೃಷ್ಣಾ ಹಾಗೂ ಘಟಪ್ರಭಾ ಎರಡು ನದಿಗಳಲ್ಲಿ ಸದ್ಯಕ್ಕೆ ನೆರೆ ಭೀತಿ ಇಲ್ಲ. ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹ ಬರಬಹುದು ಎಂದು ನಿರೀಕ್ಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ನಗರದ ರಮಾ ನಿವಾಸದಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಮಳೆ ಜಾಸ್ತಿಯಾದರೆ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತದೆ. ಈ ಕುರಿತು ಅಲ್ಲಿನ ಅಧಿಕಾರಿಗಳ ಜತೆಗೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ವರ್ಷ ಸಾಕಷ್ಟು ಮಳೆಯಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಅವರ ಆದೇಶದಂತೆ ಘಟಪ್ರಭಾ ಮತ್ತು ಕೃಷ್ಣಾ ನದಿ ಹಿಪ್ಪರಗಿ ಬ್ಯಾರೇಜ್‌ಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಕುರಿತು ಅವಲೋಕನ ಮಾಡಿದ್ದೇನೆ ಎಂದರು.

ಮೇ 30 ಮತ್ತು 31 ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳ ಸಭೆ ನಡೆಸಲಿದ್ದಾರೆ. ಸದ್ಯಕ್ಕೆ ಪ್ರವಾಹದಿಂದ ಹಾನಿ ಆಗಿಲ್ಲ. ಮಳೆ-ಗಾಳಿಗೆ ಕೆಲ ಮನೆಗಳ ಪತ್ರಾಸ್‌ಗಳು ಕಿತ್ತು ಹೋಗಿದ್ದು, ಅವುಗಳ ಬಗ್ಗೆ ಸರ್ವೇ ಮಾಡಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿರುವೆ. ಪ್ರವಾಹ ಸಮಯದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಿಂದ ತೊಂದರೆಯಾಗಬಾರದು ಎನ್ನುವ ಕಾಳಜಿ ಸಿಎಂ ಅವರದ್ದಾಗಿದೆ. ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದಾರೆ ಎಂದರು.

ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರು ಆರ್‌ಸಿಗಳಿಗೆ ಸ್ಥಳಾಂತರ ಆಗುವಂತಿದ್ದರೆ ಅವರಿಗೆ ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜೂನ್ ತಿಂಗಳಲ್ಲಿ ಶಾಲೆಗಳು, ಅಂಗನವಾಡಿಗಳು ಪ್ರಾರಂಭವಾಗುತ್ತಿದ್ದು, ಶಾಲೆ ಕಟ್ಟಡಗಳು ಸೋರುತ್ತಿದ್ದರೆ ಅವುಗಳನ್ನು ಕೂಡಲೇ ರಿಪೇರಿ ಮಾಡಿಸುವಂತೆ ತಿಳಿಸಿದ್ದೇವೆ. ಈ ಬಾರಿ ಮಳೆ ಚೆನ್ನಾಗಿ ಆಗಿದೆ. ಬೀಜ, ಗೊಬ್ಬರ ಕೊರತೆ ಇಲ್ಲ. ಮಳೆಯಿಂದಾಗಿ ತಾಲೂಕಿನಲ್ಲಿನ ರಸ್ತೆಗಳು ಹಾಳಾಗಿದ್ದು, ರಿಪೇರಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ, ಮುಖಂಡ ತೌಫಿಕ ಪಾರ್ಥನಳ್ಳಿ, ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಜಿಪಂ ಸಿಇಒ ಶಶಿಧರ ಕುರೇರ, ಎಸಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಅಬುಬಕರ ಕುಡಚಿ, ಲಿಂಗರಾಜ ಪಾಟೀಲ, ಪೌರಾಯುಕ್ತ ಜ್ಯೋತಿ ಗಿರೀಶ, ಲೋಕೋಪಯೋಗಿ ಇಲಾಖೆ ಎಇಇ ಎಸ್.ಆರ್. ಬಂಡಿವಡ್ಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net