

ಇಳಕಲ್ಲ (ಗ್ರಾ) : ಭಾನುವಾರ ರಾತ್ರಿ ಸುಮಾರು ಎರಡು ಗಂಟೆ ಕಾಲ ಸುರಿದ ಮಳೆಗೆ ನಗರದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜನತೆ ತೊಂದರೆ ಅನುಭವಿಸಬೇಕಾಯಿತು. ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಜೊತೆಗೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು. ಬಿತ್ತನೆ ಕಾರ್ಯಗಳಿಗೆ ಅನುಕೂಲ ಮಾಡಿಕೊಟ್ಟಿದೆ.
ನಗರದ ಕಾಮತ್ ಹೋಟೆಲ್ ಪಕ್ಕದ ವಾಣಿಜ್ಯ ಸಂಕೀರ್ಣದ ಕೆಳ ಮಹಡಿಯಲ್ಲಿ ನೀರು ತುಂಬಿಕೊಂಡಿದ್ದು, ಸೋಮವಾರ ಬೆಳಗ್ಗೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ನೀರು ಹೊರಹೋಗುವಂತೆ ಮಾಡಿದರು.
ಚರಂಡಿಗಳಲ್ಲಿ ಹಾಳು ಮಣ್ಣು, ಕಸ ಕಡ್ಡಿಗಳಿಂದ ತುಂಬಿಕೊಂಡಿದ್ದರಿಂದ ಮಳೆ ನೀರು ಮುಂದೆ ಸಾಗದೇ ರಸ್ತೆಗಳ ಮೇಲೆ ಹರಿದಾಡಿವೆ. ಚರಂಡಿಗಳನ್ನು ಸಹ ನಗರಸಭೆ ಸಿಬ್ಬಂದಿಗಳು ಮುಂಜಾನೆ ಸ್ವಚ್ಛಗೊಳಿಸಿದರು.
ಇಳಕಲ್‌ದಲ್ಲಿ 47.4 ಮಿ.ಮೀ., ಕರಡಿಯಲ್ಲಿ 32 ಮಿ.ಮೀ., ಕಂದಗಲ್ಲದಲ್ಲಿ 35.4 ಮಿ.ಮೀ., ಗುಡೂರ ಎಸ್.ಸಿ. ಗ್ರಾಮದಲ್ಲಿ 24 ಮಿ.ಮೀ. ಮಳೆ ಸುರಿದಿದೆ.