1710 ಹಳ್ಳಿಗೆ ನೆರೆಭೀತಿ: ಕ್ರಿಯಾಯೋಜನೆ ಸಿದ್ಧ, ರಾಜ್ಯ ಸರ್ಕಾರ ಸನ್ನದ್ಧ

Falls
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಮುಂಗಾರು ಆರಂಭದಲ್ಲೇ ರಾಜ್ಯದಲ್ಲಿ ನೆರೆಯ ಭೀತಿ ಕಾಡಲಾರಂಭಿಸಿರುವ ಪರಿಣಾಮ 1710 ಹಳ್ಳಿಗಳಿಗೆ ಎದುರಾಗುವ ಸಂಕಷ್ಟದ ಅಪಾಯ ಗುರುತಿಸಿರುವ ಸರ್ಕಾರ ಜನರ ರಕ್ಷಣೆಗಾಗಿ ಕೆಲವೊಂದು ಕಾರ್ಯಯೋಜನೆ ರೂಪಿಸಿ, ಸಿದ್ಧತೆ ಕೂಡ ಆರಂಭಿಸಿದೆ.

ಸದಾ ಪ್ರವಾಹ ಎದುರಿಸುವ 23 ಜಿಲ್ಲೆಗಳ 148 ತಾಲೂಕಿನ, 1710 ಹಳ್ಳಿಗಳನ್ನು ಸಂಪೂರ್ಣ ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರತಿ ವರ್ಷ ಅದೇ ಹಳ್ಳಿಗಳ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈ ಎಲ್ಲ ಹಳ್ಳಿಗಳು ಬಹುತೇಕ ನದಿಪಾತ್ರದಲ್ಲಿಯೇ ಬರುತ್ತವೆ. ಅದರಲ್ಲಿಯೂ 952 ಹಳ್ಳಿಗಳು ಅತಿ ಹೆಚ್ಚಿನ ಹಾನಿಗೆ ಒಳಗಾಗುವಂಥವಾಗಿರುವುದು ಆತಂಕದ ಸಂಗತಿಯಾಗಿದೆ. 758 ಹಳ್ಳಿಗಳು ಸ್ವಲ್ಪ ಕಡಿಮೆ ಮಟ್ಟದ ಹಾನಿಗೆ ಒಳಗಾಗುತ್ತವೆ. ಸರ್ಕಾರ 2008 ರಿಂದಲೂ ಹಳ್ಳಿಗಳ ಸ್ಥಳಾಂತರಕ್ಕೆ ಪ್ರಯತ್ನ ನಡೆಸಿದೆ. ಬಹುತೇಕ ಕಡೆ ಮನೆಗಳನ್ನು ನಿರ್ಮಿಸಿದ್ದರೂ ಸ್ಥಳಾಂತರವಾಗಲು ಜನ ಒಪು$್ಪತ್ತಿಲ್ಲ.

ಹೆಚ್ಚಿನ ಮಳೆ: ರಾಜ್ಯದಲ್ಲಿ ಮುಂಗಾರುಪೂರ್ವ ಹಾಗೂ ಮುಂಗಾರು ಮಳೆ ಉತ್ತಮವಾಗಿದೆ. ಮುಂಗಾರುಪೂರ್ವ ಮಳೆ ಶೇ.74 ಅಧಿಕವಾಗಿದ್ದರೆ, ಮುಂಗಾರು ಮಳೆ ಶೇ.24 ಹೆಚ್ಚು ಆಗಿದೆ ಎಂಬ ಮಾಹಿತಿ ಲಭಿಸಿದೆ.

209 ಕೋಟಿ ಹಾನಿ
ರಾಜ್ಯದಲ್ಲಿ ಈ ವರ್ಷ ಸೈಕ್ಲೋನ್​ನಿಂದಾಗಿ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ 209.3 ಕೋಟಿ ರೂ. ಹಾನಿ ಆಗಿರುವ ಅಂದಾಜು ಮಾಡಲಾಗಿದೆ.

ಇಂದು ಸಿಎಂ ಸಂವಾದ
ಬೆಂಗಳೂರು: ಮುಂಗಾರು ಆರಂಭವಾಗು ತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು 20 ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಸಿಎಂ ಯಡಿಯೂರಪ್ಪ ಶನಿವಾರ ವಿಡಿಯೋ ಸಂವಾದ ನಡೆಸಲಿದ್ದಾರೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್​, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಡಳಿತಗಳು ಭಾಗವಹಿಸಲಿವೆ. ಡಿಸಿಎಂಗಳು, ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net