

ಮಾಂಜರಿ: ಕಳೆದ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ನೂರು ಮನೆ ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಅದರಂತೆ ಇದೀಗ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಲ್ಲಿ ಶುಕ್ರವಾರ 5 ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈ ಹಿಂದೆಯೇ ಮನೆ ಕಾಮಗಾರಿಗೆ ಚಾಲನೆ ಸಿಗಬೇಕಾಗಿತ್ತು. ಆದರೆ, ಕೋವಿಡ್-19 ಮತ್ತು ಅತಿವೃಷ್ಟಿ ಕಾರಣದಿಂದಾಗಿ ವಿಳಂಬವಾಯಿತು ಎಂದು ತಿಳಿಸಿದರು.
ಪ್ರತಿ ಮನೆಗೆ 5 ಲಕ್ಷ ರೂ. ವೆಚ್ಚ: ಸಂತ್ರಸ್ತರಿಗೆ 400 ಚದರ್ ಅಡಿಯ ವಿಸ್ತೀರ್ಣದಲ್ಲಿ ಒಂದು ಕುಟುಂಬ ನೆಲೆಸಲು ಎಲ್ಲ ರೀತಿಯಿಂದ ಅನುಕೂಲವಾಗುವಂತೆ ಒಂದು ಹಾಲ್, ಒಂದು ಬೆಡ್‌ರೂಂ, ಅಡುಗೆ ಮನೆ, ಶೌಚಗೃಹ ಹಾಗೂ ಸ್ನಾನಗೃಹಗಳಿಂದ ಕೂಡಿದ ಸುಸಜ್ಜಿತವಾದ ಮನೆ ನಿರ್ಮಿಸಲಾಗುತ್ತಿದೆ. ಸುಮಾರು 5 ಲಕ್ಷ ರೂ. ವರೆಗೆ ಒಂದು ಮನೆಗೆ ಖರ್ಚಾಗಲಿದೆ. ಮನೆಗಳ ನಿರ್ಮಾಣ ಗುತ್ತಿಗೆಯನ್ನು ಬೆಂಗಳೂರಿನ ಎಸ್‌ಎಸ್ ಕಟ್ಟಡ ನಿರ್ಮಾಣ ಸಂಸ್ಥೆಗೆ ನೀಡಲಾಗಿದೆ. ಭೇದ ಮಾಡದೆ ಫಲಾನುಭವಿಗಳ ಆರ್ಥಿಕ ಪರಿಸ್ಥಿತಿ ಗಮನಿಸಿ ಮನೆ ಸೌಲಭ್ಯ ಕೊಡಲಾಗುತ್ತಿದೆ. ಸರ್ಕಾರದ ಸಹಾಯದಿಂದ ವಂಚಿತರಾದ ಸಂತ್ರಸ್ತರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.
ಅನೇಕರ ವಾಗ್ದಾನ: ಬೆಂಗಳೂರಿನ ಸರ್ಪಭೂಷಣ ಮಠದ ಶ್ರೀ, ಸೊಲ್ಲಾಪುರ ಹೊಟಗಿ ಮಠದ ಶ್ರೀ, ಹೊನ್ನಾಳಿ ಹಿರೇಕಲ್ಮಠದ ಶ್ರೀ, ಸೇಡಂ ಸದಾಶಿವ ಶ್ರೀ, ಮಾನ್ವಿಯ ಕಲ್ಮಠದ ಶ್ರೀ, ಗದಗದ ಜಗದ್ಗುರು ಪಂಚಾಚಾರ್ಯ ಸೇವಾ ಸಂಘ, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ, ಬಳೂತಿಯ ನಂದಬಸಪ್ಪ ಚೌಧರಿಯವರು, ಸಹದನೂರು ವಿನೋದ ರೆಡ್ಡಿ (ಗ್ರಾಮಸ್ಥರಿಂದ ಸಂಗ್ರಹಿಸಿ), ನ್ಯಾಯಾಧೀಶ ಶಿವರಾಜ ಪಾಟೀಲ, ಸಿಂಧನೂರಿನ ಅಮರೇಗೌಡ ಕಾನಿಹಾಳ, ಮುರುಂ ಬಸವರಾಜ ಪಾಟೀಲ, ಅಂಕಲಿ ಮಲ್ಲಿಕಾರ್ಜುನ ಕೋರೆ, ಕಾರಟಗಿ ಚನ್ನಬಸಯ್ಯ ಮುತ್ತಿನ ಪೆಂಡಿಮಠ, ದೇವದುರ್ಗ ಭೀಮನಗೌಡ ರುದ್ರಗೌಡ ಪಾಟೀಲ, ವಿಜಯಪುರದ ಶಿವಾನಂದ ಪಾಟೀಲ, ದಾವಣಗೆರೆಯ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸೇವಾ ಸಮಿತಿ, ದಾವಣಗೆರೆಯ ಮುರುಗೇಶ ಆರಾಧ್ಯ, ದಾವಣಗೆರೆ ಬಿ.ಸಿ.ಉಮಾಪತಿ ಮತ್ತಿತರರ ತಲಾ ಒಂದೊಂದು ಮನೆ ನಿರ್ಮಿಸಿಕೊಡಲು ವಾಗ್ದಾನ ಮಾಡಿದ್ದಾರೆ ಎಂದು ಶ್ರೀಗಳು ಮಾಹಿತಿ ನೀಡಿದರು.
ಶ್ರೀಶೈಲ ಶಾಸ್ತ್ರಿಗಳು, ಮಲ್ಲಿಕಾರ್ಜುನ ಕೋರೆ, ಅಜಿತ ದೇಸಾಯಿ, ನರಸಗೌಡ ಪಾಟೀಲ, ಶ್ರೀಕಾಂತ್ ಉಮ್ರಾಣಿ, ಎಂ.ಆರ್. ಪಾಟೀಲ,
ಮೋಹನ ದಂಡಿನ, ಸುನೀಲ ಬಿರದೆ, ಸಂತೋಷ ಬಾವಿದಂಡಿ, ಅಜಯ ಸೂರ್ಯವಂಶಿ, ಶೇಖರ ಕರೋಶಿ, ಜಯಪಾಲ ಬೋರಗಾವಿ, ಅಮರ ಬೋರಗಾವಿ, ಶಿವಾನಂದ ಕರೋಶಿ, ಅಡವಯ್ಯ ಅರಳಿಕಟ್ಟಿ ಮಠ, ನರಗೌಡ ಕಮತೆ, ಅಪ್ಪು ಬೆಳವಿ, ಲಕ್ಷ್ಮಣ ಹಕಾರೆ ಇದ್ದರು.
ಈಗಾಗಲೇ ಸಂತ್ರಸ್ತರ ಮನೆಗಳ ನಿರ್ಮಾಣಕ್ಕಾಗಿ ಚಿನ್ನವನ್ನು ಮಾರಾಟ ಮಾಡಿ ಬಂದ 34 ಲಕ್ಷ ರೂ., ಸಾರ್ವಜನಿಕರಿಂದ ಈ ಯೋಜನೆಗಾಗಿ ಬ್ಯಾಂಕ್‌ಗೆ ಜಮಾ ಆಗಿರುವ 30 ಲಕ್ಷ ರೂ.ನಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಯಡೂರು ವೀರಭದ್ರ ದೇವ- ಕಾಡದೇವರ ಮಠ ಸಂಸ್ಥಾನ 5 ಮನೆ, ಖ್ಯಾತ ಉದ್ಯಮಿ ಹಾಗೂ ವಿಆರ್‌ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ಡಾ.ವಿಜಯ ಸಂಕೇಶ್ವರ ಅವರು 5 ಮನೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು 2 ಮನೆ ನಿರ್ಮಿಸಿಕೊಡಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.