

ನರಗುಂದ: ಬೆಳಗಾವಿ ಜಿಲ್ಲಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನವಿಲುತೀರ್ಥ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಖಾನಾಪುರ ತಾಲೂಕಿನ ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಿಂದ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದಲ್ಲಿ ಈಗಾಗಲೇ 2075.85 ಅಡಿ ನೀರು ಸಂಗ್ರಹಗೊಂಡಿದೆ. ಡ್ಯಾಂ ಭರ್ತಿಗೆ ಕೇವಲ 4 ಅಡಿ ಬಾಕಿಯಿದ್ದು, ಪ್ರತಿದಿನ 24,400 ಕ್ಯೂಸೆಕ್ ಒಳ ಹರಿವು ಬರುತ್ತಿದೆ.
ತಾಲೂಕಿನ ಕೊಣ್ಣೂರ ಮಲಪ್ರಭಾ ನದಿಗೆ ಗುರುವಾರದಿಂದ 15 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ಇದರಿಂದ ತಾಲೂಕಿನ ಗಡಿಗ್ರಾಮ ಲಖಮಾಪುರದ ಹಳೆಯ ಸೇತುವೆ ಮೇಲೆ ನೀರು ಹರಿಯುತ್ತಿದೆ. ನದಿಪಾತ್ರದ ಕೆಲ ಜಮೀನುಗಳಿಗೆ ನೀರು ನುಗ್ಗಿದೆ. ಲಖಮಾಪುರ ಕೊನೆಯಂಚಿನ ಮನೆಗಳಿಗೂ ನೀರು ನುಗ್ಗುವ ಸಾಧ್ಯತೆ ದಟ್ಟವಾಗಿದೆ. ಮಳೆ ಮತ್ತಷ್ಟು ಬಿರುಸುಗೊಂಡರೆ ಈ ಗ್ರಾಮದ ಏಕೈಕ ಸಂಪರ್ಕ ರಸ್ತೆ ಕಡಿತಗೊಂಡು ಸಂಪೂರ್ಣ ನಡುಗಡ್ಡೆಯಂತಾಗಲಿದೆ.
ಮುಂಜಾಗ್ರತೆ ಕ್ರಮವಾಗಿ ತಾಲೂಕಿನ ಕೊಣ್ಣೂರ ಬಳಿಯ ಹಳೆಯ ಸೇತುವೆ ಮೂಲಕ ಜನ, ವಾಹನ ಸಂಚಾರ ನಡೆಸದಂತೆ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಅಳವಡಿಸಿ, ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ತಹಸೀಲ್ದಾರ್ ಶ್ರೀಶೈಲ ತಳವಾರ, ತಾಪಂ ಇಒ ಎಸ್.ಕೆ. ಇನಾಂದಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ ಭೋವಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ, ಕಂದಾಯ ನೀರಿಕ್ಷಕರು ಪ್ರವಾಹ ಪರಿಶೀಲನೆ ನಡೆಸಿದ್ದು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತಿದ್ದಾರೆ.