ಪ್ರವಾಹದ ಭೀತಿ ಹೈ ಅಲರ್ಟ್: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತುರ್ತು ಸಭೆ

Flood related DC meeting Mandya
Published on

ಮಂಡ್ಯ: ಕಾವೇರಿ ಕಣಿವೆ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಡ್ಯಾಂನ ನೀರಿನಮಟ್ಟ ಗರಿಷ್ಟ ಮಟ್ಟದತ್ತ ತಲುಪುತ್ತಿದೆ. ಮಾತ್ರವಲ್ಲದೆ ಒಳಹರಿವಿನ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ತುರ್ತು ಸಭೆ ಆಯೋಜಿಸಿ ಮುನ್ನೆಚ್ಚರಿಕೆ ವಹಿಸುವುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಲವು ಮಹತ್ವದ ವಿಷಯದ ಚರ್ಚೆ ನಡೆಯಿತು. ಮಳೆ ಹೆಚ್ಚಾಗಿ ಕೆಆರ್‌ಎಸ್ ಡ್ಯಾಂಗೆ ಬರುವ ನೀರಿನ ಪ್ರಮಾಣದಲ್ಲಿ ಏರಿಕೆಯಾದರೆ ಹಾಗೂ 124.80 ಗರಿಷ್ಟ ಸಂಗ್ರಹದ ಡ್ಯಾಂನಲ್ಲಿ ನೀರಿನಮಟ್ಟ 120 ಅಡಿ ತಲುಪುತ್ತಿದ್ದಂತೆ ನದಿಗೆ ನೀರು ಬಿಡಲೇಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಹಂತದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ರಚಿಸಿ ಜವಾಬ್ದಾರಿಯನ್ನು ನೀಡಲಾಯಿತು.
89 ಗ್ರಾಮಕ್ಕೆ ಸಮಸ್ಯೆ ನಿರೀಕ್ಷೆ: ಕೆಆರ್‌ಎಸ್ ಡ್ಯಾಂನಿಂದ ಹಂತ ಹಂತವಾಗಿ ನದಿಗೆ ನೀರು ಬಿಡಲು ಯೋಜಿಸಲಾಗಿದೆ. ಅದರಂತೆ ಸುಮಾರು 50 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ನದಿಗೆ ಹರಿಸಿದರೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ 15, ಮಳವಳ್ಳಿಯಲ್ಲಿ 9 ಮತ್ತು ಪಾಂಡವಪುರದಲ್ಲಿ 7 ಗ್ರಾಮಕ್ಕೆ ಸಮಸ್ಯೆಯಾಗಬಹುದು. ಜತೆಗೆ ಒಂದೂವರೆ ಲಕ್ಷ ಕ್ಯೂಸೆಕ್‌ಗೂ ಹೆಚ್ಚಿನ ನೀರನ್ನು ಹರಿಸಬೇಕಾದ ಪರಿಸ್ಥಿತಿ ಎದುರಾದರೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ 53, ಮಳವಳ್ಳಿಯಲ್ಲಿ 21 ಮತ್ತು ಪಾಂಡವಪುರದಲ್ಲಿ 15 ಗ್ರಾಮ ಸೇರಿದಂತೆ 89 ಗ್ರಾಮದಲ್ಲಿ ಪ್ರವಾಹದಿಂದ ಸಮಸ್ಯೆ ಎದುರಾಗಬಹುದು. ಹಿಂದಿನ ವರ್ಷದಲ್ಲಿ ಪ್ರವಾಹದ ಸ್ಥಿತಿಯಲ್ಲಿ ಆಗಿರುವ ಪರಿಣಾಮವನ್ನು ಆಧರಿಸಿ ಗ್ರಾಮಗಳನ್ನು ಪಟ್ಟಿ ಮಾಡಿಕೊಂಡಿದ್ದ ಡಿಸಿ ಡಾ.ಕುಮಾರ, ತಹಸೀಲ್ದಾರ್ ಮತ್ತು ತಾಪಂ ಇಒ, ಪಿಡಿಒ ತಮ್ಮ ವ್ಯಾಪ್ತಿಯಲ್ಲಿ ತುರ್ತು ಕ್ರಮ ವಹಿಸಬೇಕು. ಪ್ರವಾಹ ಬರುತ್ತದೋ ಇಲ್ಲವೋ ಮುನ್ನೆಚ್ಚರಿಕೆ ವಹಿಸಲೇಬೇಕು. ಟಾಸ್ಕ್‌ಪೋರ್ಸ್ ಸಮಿತಿ ಅಲರ್ಟ್ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಾತ್ರವಲ್ಲದೆ ಸಮಸ್ಯೆ ಎದುರಾಗಬಹುದಾದ ಗ್ರಾಮಕ್ಕೆ ತುರ್ತಾಗಿ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಮುಖ್ಯವಾಗಿ ನದಿಪಾತ್ರದ ಜನರಿಗೆ ಅತ್ಯಗತ್ಯವಾಗಿ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಸಮಸ್ಯೆಯಾಗಲಿದೆ ಎಂದು ಇತ್ತೀಚೆಗೆ ಡ್ಯಾಂನಿಂದ ನಾಲೆಗೆ ನೀರು ಬಿಟ್ಟಾಗ ಮಂಡ್ಯ ತಾಲೂಕಿನ ಹೊನಗಾನಹಳ್ಳಿ ಮಠ ಗ್ರಾಮದಲ್ಲಿ ಮಗು ಕೊಚ್ಚಿ ಹೋದ ಘಟನೆಯನ್ನು ಉದಾಹರಣೆಯಾಗಿ ನೀಡಿದ ಡಿಸಿ, ಪ್ರತಿ ಮಾಹಿತಿಯನ್ನೂ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಮುಖ್ಯವಾಗಿ ಪ್ರವಾಹದ ಪರಿಸ್ಥಿತಿ ಎದುರಾದರೆ ಯಾವೆಲ್ಲ ಸಮಸ್ಯೆಯಾಗಬಹುದು. ಅದಕ್ಕೆ ಪರಿಹಾರ ಏನು ಬೇಕು. ಅಂದರೆ ಜೆಸಿಬಿ, ಬೋಟ್, ನುರಿತ ಈಜುಗಾರರು ಸೇರಿದಂತೆ ಅಗತ್ಯ ಮಾಹಿತಿ ಸಿದ್ಧವಿರಬೇಕು. ಎಂತಹ ಪರಿಸ್ಥಿತಿಯಲ್ಲಿಯೂ ಉದಾಸೀನ ಮಾಡಬಾರದು. ಅಂತೆಯೇ ಜಿಲ್ಲೆಯಲ್ಲಿ ಸ್ವಯಂ ಸೇವಕರ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿರಬೇಕು ಎಂದು ತಿಳಿಸಿದರು.
ಇನ್ನು ಸ್ಥಳಾಂತರ ಮಾಡಲೇಬೇಕಾದ ಪರಿಸ್ಥಿತಿ ಎದುರಾದರೆ ಕಾಳಜಿ ಕೇಂದ್ರ ತೆರಯಬೇಕು. ರಸ್ತೆ ಹಾಳಾದರೆ ಪರ್ಯಾಯ ಮಾರ್ಗ ಯಾವುದೆಂದು ಅಧಿಕಾರಿಗಳು ತಿಳಿದುಕೊಂಡಿರಬೇಕು. ಸಾರಿಗೆ ಸಂಪರ್ಕ ವ್ಯತ್ಯಯವಾದರೆ ಬದಲೀ ವ್ಯವಸ್ಥೆ ಇರಬೇಕು. ಶೀತಲ ಪ್ರದೇಶ, ವಿದ್ಯುತ್ ಕಂಬ ಹಾಳಾದರೆ ತ್ವರಿತವಾಗಿ ಕ್ರಮ ವಹಿಸಲು ಚೆಸ್ಕಾಂ ಅಧಿಕಾರಿ, ಸಿಬ್ಬಂದಿ ಸಿದ್ಧವಿರಬೇಕು. ಇಳಿಮುಖ ಪ್ರದೇಶದಲ್ಲಿ ವಾಸವಿರುವವರ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.
ಹೇಮಾವತಿ ನೀರಾವರಿ ನಿಗಮದ ಇಇ ಆನಂದ್ ಮಾತನಾಡಿ, ಹೇಮಾವತಿ ನದಿಯಿಂದ 1,50 ಲಕ್ಷ ಕ್ಯೂಸೆಕ್ ನೀರು ಬಿಟ್ಟಾಗಲೂ ಸಮಸ್ಯೆಯಾಗಿಲ್ಲ. ಆದರೆ ಚಿಕ್ಕಮಂದಗರೆ ಭಾಗದಲ್ಲಿ ಮೀನುಗಾರರು ನದಿಪಾತ್ರದಲ್ಲಿಯೂ ಇರುತ್ತಾರೆ. ಎಷ್ಟು ಹೇಳಿದರೂ ನಿರ್ಲಕ್ಷೃ ಮಾಡುತ್ತಾರೆ. ಆದ್ದರಿಂದ ಕಿಕ್ಕೇರಿ ಪೊಲೀಸರಿಂದ ಅವರಿಗೆ ಎಚ್ಚರಿಕೆ ಕೊಡಿಸಬೇಕು ಎಂದಾಗ ಪ್ರತಿಕ್ರಿಯಿಸಿ ಡಿಸಿ, ಈ ಬಗ್ಗೆ ಕೂಡಲೇ ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಎಸಿಗಳಾದ ಶಿವಮೂರ್ತಿ, ನಂದೀಶ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರ್, ತಾಪಂ ಇಒ, ಪಿಡಿಒಗಳಿದ್ದರು.

ವಿಡಿಯೋ ಚಿತ್ರೀಕರಿಸಿ
ಪ್ರವಾಹದ ಪರಿಸ್ಥಿತಿ ಎದುರಾದರೂ ಶ್ರೀರಂಗಪಟ್ಟಣ ತಾಲೂಕು ಗೌತಮಕ್ಷೇತ್ರ, ಬೊಮ್ಮೂರಿನ ಸರ್ವಧರ್ಮ ಆಶ್ರಮ ಸೇರಿದಂತೆ ಕೆಲವೆಡೆ ವಾಸವಿರುವವರು ಸ್ಥಳಾಂತರಕ್ಕೆ ಒಪ್ಪುವುದಿಲ್ಲ. ಹಿಂದೆ ಇದೇ ಪರಿಸ್ಥಿತಿ ಬಂದಾಗ ಮನವಿ ಮಾಡಿಕೊಂಡರೂ ಸ್ಪಂದಿಸಲಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿ ಡಿಸಿ, ಪ್ರವಾಹದ ಬಗ್ಗೆ ಅಗತ್ಯವಾಗಿ ಹಾಗೂ ತಪ್ಪದೇ ಅವರಿಗೆ ಮಾಹಿತಿ ಕೊಡಿ. ಜತೆಗೆ ನೋಟಿಸ್ ನೀಡಿ. ಈ ಎಲ್ಲವೂ ದಾಖಲೆಯಾಗುವಂತೆ ವಿಡಿಯೋ ಚಿತ್ರೀಕರಣ ಮಾಡಿ. ಇಡೀ ತಂಡ ಇದನ್ನು ನಿರ್ವಹಣೆ ಮಾಡಿ. ಇಲ್ಲದಿದ್ದರೆ ಅಧಿಕಾರಿಗಳು ತಪ್ಪು ಮಾಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಅಂತೆಯೇ ನದಿಪಾತ್ರದಲ್ಲಿರುವ ಬೆಳೆಗಳು ಸಮೀಕ್ಷೆ ಮಾಡಿ ಸರ್ವೇ ನಂಬರ್ ಆಧಾರದಲ್ಲಿ ವರದಿ ತಯಾರಿಸಿಟ್ಟುಕೊಳ್ಳುವ ಕೆಲಸವನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ತುರ್ತಾಗಿ ಮಾಡಬೇಕು. ಇಲ್ಲದಿದ್ದರೆ ಬೆಳೆ ನಷ್ಟವಾಯಿತೆಂದು ರೈತರು ಮನವಿ ಕೊಡುತ್ತಾರೆ, ನೀವು ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತೀರಿ. ಆದ್ದರಿಂದ ಮೊದಲೇ ವರದಿ ಇದ್ದರೆ ಕಾನೂನು ಪ್ರಕಾರದಂತೆ ಪರಿಹಾರ ನೀಡಬಹುದು. ಅದೇ ರೀತಿ ನದಿಪಾತ್ರದ ಜಮೀನಿನಲ್ಲಿ ಮಣ್ಣು ಕೊಚ್ಚಿ ಹೋಗಿ ಹಾಳಾಗುವ ಬಗ್ಗೆಯೂ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಿ ಎಂದರು.

ತಕ್ಷಣ ಮಾಹಿತಿ ಹಂಚಿಕೊಳ್ಳಿ
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ರಘುರಾಂ ಮಾತನಾಡಿ, ಡ್ಯಾಂನಲ್ಲಿ ನೀರಿನಮಟ್ಟ 120 ಅಡಿ ತಲುಪುತ್ತಿದ್ದಂತೆ ನದಿಗೆ ಬಿಡಲಾಗುವುದು. ಇದು ಯಾವ ಸಮಯದಲ್ಲಾದರೂ ಆಗಬಹುದು. ಒಳಹರಿವಿನ ಪ್ರಮಾಣ 50 ರಿಂದ 60 ಕ್ಯೂಸೆಕ್ ಮುಟ್ಟುವ ಸಾಧ್ಯತೆ ಇದೆ. ಆದ್ದರಿಂದ ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಬೇಕು. ಜತೆಗೆ ಯಾವುದೇ ಸಮಸ್ಯೆ ಇದ್ದರೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ತಕ್ಷಣವೇ ಮಾಹಿತಿ ಕೊಡಬೇಕು. ಇನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಬಂಧ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಯಂತ್ರೋಪಕರಣಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಹೇಳಿದರು.

ಪ್ರವಾಸಿತಾಣದಲ್ಲಿ ಭದ್ರತೆ ನಿಯೋಜನೆ
ನೀರನ್ನು ನದಿಗೆ ಬಿಟ್ಟಂತಹ ಸಂದರ್ಭದಲ್ಲಿ ಅದನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿತಾಣ, ನದಿಪಾತ್ರದ ಸ್ಥಳದಲ್ಲಿ ಪೂಜೆ ಮಾಡಲು ಹಾಗೂ ಈಜಲು ಬರದಂತೆ ತಡೆಯಲು ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಅಧಿಕಾರಿಗಳು ಮಾಹಿತಿ ಕೊಟ್ಟರೆ ಕೂಡಲೇ ಸಿಬ್ಬಂದಿ ನಿಯೋಜಿಸಲಾಗುವುದು. ಜತೆಗೆ ಸ್ಥಳಾಂತರ ಮಾಡುವ ವಿಚಾರದಲ್ಲಿಯೂ ಇಲಾಖೆ ಅಧಿಕಾರಿಗಳೊಂದಿಗೆ ಸೇರಿ ಕರ್ತವ್ಯ ನಿರ್ವಹಣೆ ಮಾಡಲಿದೆ ಎಂದರು. ಇದಕ್ಕೆ ದನಿಗೂಡಿಸಿ ಡಿವೈಎಸ್ಪಿಗಳು, ಗೃಹರಕ್ಷಕ ದಳದ ಸಿಬ್ಬಂದಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಡಿಸಿ, ಅದರ ಮಾಹಿತಿಯನ್ನು ಕೂಡಲೇ ಸಲ್ಲಿಸಿ. ತಕ್ಷಣವೇ ಅನುಮತಿ ನೀಡಲಾಗುವುದು. ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನೊದಗಿಸಿ ಎಂದು ಗೃಹರಕ್ಷಕ ದಳದ ಅಧಿಕಾರಿಗೆ ಸೂಚಿಸಿದ ಡಾ.ಕುಮಾರ, ಕೂಡಲೇ ಪ್ರವಾಸಿತಾಣ ಸೇರಿದಂತೆ ಅಗತ್ಯ ಸ್ಥಳದಲ್ಲಿ ಜನರಿಗೆ ಮಾಹಿತಿ ನೀಡಲು ನಾಮಫಲಕ ಅಳವಡಿಸಬೇಕು ಎಂದು ತಿಳಿಸಿದರು.

ನಿರ್ಲಕ್ಷಿೃಸಿದರೆ ಸಹಿಸಲ್ಲ
ಕೆಳಹಂತದ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ಅವರು ನೋಡಿಕೊಳ್ಳುತ್ತಾರೆನ್ನುವ ಮನೋಭಾವದೊಂದಿಗೆ ನಿರ್ಲಕ್ಷೃ ವಹಿಸಿದರೆ ಸಹಿಸುವುದಿಲ್ಲ ಎಂದು ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಎಚ್ಚರಿಕೆ ನೀಡಿದರು.
ಸಮಸ್ಯೆ ಸೂಕ್ಷ್ಮ ಎನಿಸಿದಾಗ ಖುದ್ದು ಮೇಲಧಿಕಾರಿಗಳೇ ಗಮನಕೊಡಬೇಕು. ತಾಪಂ ಇಒಗಳು ಗ್ರಾಪಂ ಪಿಡಿಒ, ಸದಸ್ಯರೊಂದಿಗೆ ಸಭೆ ಮಾಡಿ ಪರಿಸ್ಥಿತಿ ನಿರ್ವಹಣೆ ಮಾಡುವುದನ್ನು ತಿಳಿಸಿ. ಪ್ರವಾಹ ಬಂದಾಗ ಕುಡಿಯುವ ನೀರಿನ ಸಮಸ್ಯೆಯೂ ಬರುತ್ತದೆ. ಇದಕ್ಕೂ ಸಿದ್ಧತೆ ಮಾಡಿಕೊಳ್ಳಬೇಕು. ಜತೆಗೆ ಡೆಂೆ ರೋಗ ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚನೆ ನೀಡಿದರು.

ಕಂಟ್ರೋಲ್ ರೂಂ ಸ್ಥಾಪನೆ
ನೆರೆ ಅಥವಾ ಪ್ರವಾಹದ ಬಗ್ಗೆ ದೂರುಗಳಿದ್ದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆ(08232-224655), ಮಂಡ್ಯ ತಾಲೂಕು(08232-291655), ಮದ್ದೂರು(08232-291466), ಮಳವಳ್ಳಿ(08231-242267), ಪಾಂಡವಪುರ(08236-255128), ಶ್ರೀರಂಗಪಟ್ಟಣ(08236-253001), ನಾಗಮಂಗಲ(08234-298105), ಕೆ.ಆರ್.ಪೇಟೆ(08230-262227) ಯನ್ನು ಸಂಪರ್ಕಿಸಬಹುದಾಗಿದೆ.
ಕಾವೇರಿ ನೀರಾವರಿ/ಎಚ್‌ಎಲ್ಬಿಸಿಗೆ ಸಂಬಂಧಿಸಿದಂತೆ ಕೆ.ಆರ್.ಸಾಗರ ಕಾರ್ಯಪಾಲಕ ಅಭಿಯಂತರ(08236-257976), ಬನ್ನೂರು ಕಾರ್ಯಪಾಲಕ ಅಭಿಯಂತರ(9480442830), ಮಂಡ್ಯ ಕಾರ್ಯಪಾಲಕ ಅಭಿಯಂತರ(9742454353), ಕೆ.ಆರ್.ಪೇಟೆ ಎಚ್‌ಎಲ್ಬಿಸಿ ಕಾರ್ಯಪಾಲಕ ಅಭಿಯಂತರ(9242229448), ಚೆಸ್ಕಾಂ ಸಹಾಯವಾಣಿ(1912, 9448994777/888/999), ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಕಾರ್ಯಪಾಲಕ ಅಭಿಯಂತರ(9448994893), ಮಳವಳ್ಳಿ ಕಾರ್ಯಪಾಲಕ ಅಭಿಯಂತರ(9448994828), ಕೆ.ಆರ್.ಪೇಟೆ ಕಾರ್ಯಪಾಲಕ ಅಭಿಯಂತರ(9480844740) ಸಂಪರ್ಕಿಬಹುದೆಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net