

ಬೆಂಗಳೂರು: ಐಟಿ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ಅಕ್ಷರಶಃ ಮುಳುಗಿದೆ. ಅರ್ಧ ಬೆಂಗಳೂರಿನ ಜನವಸತಿ ಪ್ರದೇಶಗಳೆಲ್ಲ ಜಲಾವೃತಗೊಂಡಿವೆ. ರಸ್ತೆಗಳೆಲ್ಲ ನದಿಗಳಂತಾಗಿವೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಜಲಪ್ರಳಯದಲ್ಲಿ ಸಿಕ್ಕಿಕೊಂಡಿದ್ದ ಜನರನ್ನು ಬೋಟ್ಗಳಲ್ಲಿ ಕರೆತರುವ ಪರಿಸ್ಥಿತಿ ನಿರ್ವಣವಾಗಿದೆ. ಭಾನುವಾರ ರಾತ್ರಿ ಕೆಲವೇ ಗಂಟೆ ಸುರಿದ ಮಳೆಯಿಂದಾಗಿ ಬ್ರ್ಯಾಂಡ್ ಬೆಂಗಳೂರಿನ ಅವ್ಯವಸ್ಥೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ 14 ವರ್ಷದ ಬಳಿಕ ದಾಖಲೆ ಪ್ರಮಾಣದ ಮಳೆ ಸುರಿದಿದೆ.
ಮನೆಗಳು, ಐಟಿ-ಬಿಟಿ ಕಂಪನಿಗಳು, ಶಾಪಿಂಗ್ ಮಾಲ್ಗಳು, ಅಪಾರ್ಟ್ವೆುಂಟ್ಗಳು ಸೇರಿ 300 ಕಡೆ ಮಳೆ ನೀರು ನುಗ್ಗಿದೆ. ರಸ್ತೆಗಳಲ್ಲಿ 4 ಅಡಿವರೆಗೆ ನೀರು ಹರಿಯುತ್ತಿದೆ. ನೈಸರ್ಗಿಕವಾಗಿ ನೀರು ಹರಿಯುವ ಮೂಲಗಳಾದ ಕೆರೆ, ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮನೆ ಮತ್ತು ಬಡಾವಣೆಗಳನ್ನು ನಿರ್ವಿುಸಿಕೊಂಡ ಪರಿಣಾಮ ಪ್ರತಿ ಬಾರಿ ಮಳೆ ಬಂದಾಗಲೂ ನೀರು ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗುತ್ತಿದೆ.
ವರುಣನ ಆರ್ಭಟದಿಂದಾಗಿ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಒಂದು ವಾರದ ಮಟ್ಟಿಗೆ ಐಟಿ-ಬಿಟಿ ಕಂಪನಿಗಳು ವರ್ಕ್ ಫ್ರಂ ಹೋಂ ಘೋಷಿಸಿವೆ. ಪ್ರತಿಷ್ಠಿತ ಶಾಲೆಗಳು ಭೌತಿಕ ತರಗತಿ ಸ್ಥಗಿತಗೊಳಿಸಿ ಆನ್ಲೈನ್ಗೆ ಮೊರೆಹೋಗಿವೆ.
ಭಾನುವಾರ ಸಂಜೆಯಿಂದಲೇ ಆರಂಭವಾದ ಮಳೆ ತಡರಾತ್ರಿವರೆಗೆ ಸುರಿದಿದ್ದು, ದಕ್ಷಿಣ ಒಳನಾಡಿನಲ್ಲಿ 90 ರಿಂದ 150 ಮಿ.ಮೀ. ಪ್ರಮಾಣ ದಾಖಲಾಗಿದೆ. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ತಲಾ ಒಂದೊಂದು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಇನ್ನು, ಚಾಮರಾಜನಗರ ಜಿಲ್ಲೆಯ ದಡಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ವ್ಯಕ್ತಿ ಮೃತಪಟ್ಟಿದ್ದಾನೆ. ಶಿವಮೊಗ್ಗ ಸೇರಿ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ, ಚಾಮರಾಜನಗರ, ಮೈಸೂರು ಸೇರಿ ವಿವಿಧೆಡೆ ನದಿಗಳು ಉಕ್ಕಿ ಹರಿದಿವೆ. ನೂರಾರು ಕೆರೆಗಳು ತುಂಬಿ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಹೊಲ- ಗದ್ದೆಗಳಿಗೆ ನುಗ್ಗಿ ಬೆಳೆ ನಷ್ಟವಾಗಿದೆ.
ಮುಂದಿನ 4 ದಿನ ಮಳೆ ಇನ್ನಷ್ಟು ಬಿರುಸುಗೊಳ್ಳಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಮುಂದಿನ 48 ಗಂಟೆ ಯೆಲ್ಲೋ ಅಲರ್ಟ್ ಇದ್ದರೆ, ಸೆ.8ರಂದು ಈ ಭಾಗಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಚಿತ್ರದುರ್ಗ, ತುಮಕೂರು, ಮೈಸೂರು, ಚಾಮರಾಜನಗರ, ಬೆಂಗಳೂರು, ಬೆಂ.ಗ್ರಾಮಾಂತರ, ವಿಜಯಪುರ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಬಳ್ಳಾರಿಯಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ.
ಕುಡಿವ ನೀರಿಗೆ ಸಂಚಕಾರ: ಬೆಂಗಳೂರಿಗೆ ನೀರು ಪೂರೈಸುವ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಜಲಮಂಡಳಿಯ ಪಂಪಿಂಗ್ ಸ್ಟೇಷನ್ಗೆ ನೀರು ನುಗ್ಗಿ ಮೋಟಾರುಗಳು ಮುಳುಗಿರುವುದರಿಂದ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಇದರಿಂದ ಬೆಂಗಳೂರಿಗೆ ಕುಡಿಯುವ ನೀರಿನ ಸರಬರಾಜು ವ್ಯತ್ಯಯ ಆಗಲಿದೆ.
ಸ್ವಲ್ಪ ಸಮಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದ್ದು ತೊಂದರೆ ಆಗಲು ಕಾರಣವಾಗಿದೆ. 11 ಸಾವಿರ ಕೋಟಿ ರೂ. ನಷ್ಟದ ಅಂದಾಜನ್ನು ಕೇಂದ್ರಕ್ಕೆ ಕಳುಹಿಸುತ್ತಿದ್ದೇವೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
14 ವರ್ಷದ ಬಳಿಕ ದಾಖಲೆ ಮಳೆ: 1998ರಲ್ಲಿ 725 ಮಿ.ಮೀ ಮಳೆಯಾಗಿರುವುದು ಈವರೆಗಿನ ದಾಖಲೆಯಾಗಿತ್ತು. ಈ ವರ್ಷ ಜು. 1ರಿಂದ ಸೆಪ್ಟೆಂಬರ್ 3ರವರೆಗೆ 709 ಮಿ. ಮೀಟರ್ ಮಳೆಯಾಗಿದೆ. ಈ ಅವಧಿಯಲ್ಲಿ ಸರಾಸರಿ ಮಳೆ ಪ್ರಮಾಣ 330 ಮಿ. ಮೀ. ನಿರೀಕ್ಷಿಸಲಾಗಿತ್ತು. ಪ್ರವಾಹ ನಿರ್ವಹಣೆಗೆ 500 ಕೋಟಿ ರೂ.: ರಾಜಧಾನಿಯಲ್ಲಿ ಉಂಟಾಗಿರುವ ಜಲಪ್ರಳಯದ ತುರ್ತು ನಿರ್ವಹ ಣೆಗೆ ರಾಜ್ಯ ಸರ್ಕಾರ 500 ಕೋಟಿ ರೂ. ಬಿಡುಗಡೆ ಮಾಡಿದೆ. ಜತೆಗೆ ದೊಡ್ಡ ಮಟ್ಟದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲು ನಿರ್ಣಯಿಸಿದೆ. ಸೋಮವಾರ ಬೆಂಗಳೂರಿನ ಜಲಾವೃತ ಪ್ರದೇಶಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಪ್ರಮುಖ ನಿರ್ಣಯಗಳನ್ನು ಕೈಗೊಂಡು ಮಾಧ್ಯಮಗಳಿಗೆ ಮಾಹಿತಿ ನೀಡಿದರು.