ಪ್ರವಾಹ ಎದುರಿಸಲು ಸಿದ್ಧರಾಗಿ

6ckd4-Web
ಚಿಕ್ಕೋಡಿಯಲ್ಲಿ ಸಂಭವನೀಯ ಅತಿವೃಷ್ಟಿ ಹಾಗೂ ಪ್ರವಾಹ ಕುರಿತು ಆಯೋಜಿಸಿದ್ದ ಮುಂಜಾಗ್ರತಾ ಪೂರ್ವಭಾವಿ ಸಭೆಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣನವರ ಇದ್ದರು.
Published on

ಚಿಕ್ಕೋಡಿ: ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಭವನೀಯ ಪ್ರವಾಹ ನಿಯಂತ್ರಿಸಲು ಹಾಗೂ ಜನರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅತಿವೃಷ್ಟಿ ಹಾಗೂ ಪ್ರವಾಹ ಕುರಿತು ಉಪವಿಭಾಗದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನ್ಸೂನ್ ಹಂಗಾಮಿನಲ್ಲಿ ಮಹಾರಾಷ್ಟ್ರದಲ್ಲಿ ಸುರಿಯುವ ಅತಿಯಾದ ಮಳೆ ಹಾಗೂ ಜಲಾಶಯಗಳಿಂದ ಬಿಡುವ ನೀರಿನಿಂದ ಪ್ರತಿ ವರ್ಷ ಪ್ರವಾಹ ಸಂಭವಿಸುತ್ತದೆ. ಪ್ರವಾಹ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿ ತೀರದ ಜನವಸತಿ ಪ್ರದೇಶದಲ್ಲಿ ಬೋಟ್ ವ್ಯವಸ್ಥೆ ಮಾಡಿಕೊಂಡಿರಬೇಕು. ಹಳೆಯ ಬೋಟ್ ರಿಪೇರಿ ಮಾಡಿಸಿ ತುರ್ತು ಸಂದರ್ಭದಲ್ಲಿ ಅನುಕೂಲವಾಗುವ ಹಾಗೆ ನೋಡಿಕೊಳ್ಳಬೇಕು. ಎತ್ತರ ಪ್ರದೇಶದಲ್ಲಿ ಗಂಜಿ ಕೇಂದ್ರ ತೆರೆಯಲು ಸ್ಥಳ ಗುರುತಿಸಿ, ಜಾನುವಾರುಗಳಿಗೆ ಮೇವು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕಳೆದ ವರ್ಷ ಪ್ರವಾಹದಲ್ಲಿ ಹಾನಿಯಾದ ಮನೆಗಳಿಗೆ ಪೂರ್ಣ ಪ್ರಮಾಣದ ಮನೆ ಕಟ್ಟಿಕೊಳ್ಳಲು ಫಲಾನುಭವಿಗಳಿಗೆ ಪರಿಹಾರ ನೀಡಬೇಕು. ಅರ್ಧಕ್ಕೆ ನಿಂತಿರುವ ಮನೆಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಬೇಕು. ಪ್ರವಾಹ ಸಂದರ್ಭದಲ್ಲಿ ಎಲ್ಲ ಅಧಿಕಾರಿಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.

ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಕರೊನಾ ಹಾಗೂ ಪ್ರವಾಹ ಮುಂಜಾಗ್ರತಾ ಕ್ರಮದ ಕುರಿತು ಮಾಹಿತಿ ನೀಡಿದರು. ಡಿಡಿಪಿಐ ಗಜಾನನ ಮನ್ನಿಕೇರಿ, ಡಿವೈಎಸ್‌ಪಿ ಮನೋಜ ಪಾಟೀಲ, ಕೃಷಿ ಇಲಾಖೆ ಉಪ ನಿರ್ದೇಶಕ ಎಲ್.ಐ.ರೂಡಗಿ ಇತರರು ಇದ್ದರು.

ಮುಖ್ಯಾಧಿಕಾರಿಗೆ ತರಾಟೆ: ಕರೊನಾ ಸಂದರ್ಭದಲ್ಲಿ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಮುಖ್ಯಾಧಿಕಾರಿ ಪಿ.ಬಿ.ದೇವಮಾನೆ ಅವರನ್ನು ಸಚಿವೆ ಶಶಿಕಲಾ ಜೊಲ್ಲೆ ತೀವ್ರ ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net