

ಬೆಳಗಾವಿ: ಜಿಲ್ಲೆಯೂ ಸೇರಿದಂತೆ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಪ್ರವಾಹ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರವಾಹ ನಿಯಂತ್ರಣ ಹಾಗೂ ಪರಿಹಾರ ಕಾರ್ಯಗಳಿಗಾಗಿ ಈಗಿಂದಲೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೂಚನೆ ನೀಡಿದರು.
ಪ್ರವಾಹ ಸಾಧ್ಯತೆ ಹಾಗೂ ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ನಗರದ ಪ್ರವಾಸ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಈ ವಿಚಾರವಾಗಿ ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಜಲಾಶಯಗಳಿಂದ ಮೊದಲು ಕೆರೆ ತುಂಬಿಸಬೇಕು. ಬಳಿಕವೇ ನೀರು ಬಿಡುಗಡೆ ಮಾಡಬೇಕು. ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಟ್ಟ ತಕ್ಷಣವೇ ರಾಜ್ಯದ ಜಲಾಶಯಗಳಿಂದಲೂ ನೀರು ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಎದುರಾಗುವ ಪ್ರವಾಹ ನಿರ್ವಹಣೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಜಲಾಶಯಗಳ ಭರ್ತಿಗೆ ಇನ್ನೂ ಕಾಲಾವಕಾಶ ಇರುವುದರಿಂದ ಪ್ರವಾಹ ಭೀತಿ ಕಡಿಮೆಯಿದೆ. ಆದರೂ, ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಸಚಿವ ಜಾರಕಿಹೊಳಿ ಸಲಹೆ ನೀಡಿದರು.
ಮುನ್ನೆಚ್ಚರಿಕೆ ವಹಿಸಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಬೆಳಗಾವಿ ನಗರದಲ್ಲಿಯೂ ಪ್ರವಾಹ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕಳೆದ ವರ್ಷ ಬಳ್ಳಾರಿ ನಾಲಾ ತುಂಬಿ ಹರಿದ ಪರಿಣಾಮ ಸಾಕಷ್ಟು ಹಾನಿಯಾಗಿದೆ. ಈ ವರ್ಷ ಅದೇ ಪರಿಸ್ಥಿತಿ ಮರುಕಳಿಸದಂತೆ ಪಾಲಿಕೆ, ಜಲಮಂಡಳಿ,
ಲೋಕೋಪಯೋಗಿ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಗಳಿಗೆ ಭೇಟಿ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪ್ರತಿಕ್ರಿಯಿಸಿ, ಪ್ರವಾಹ ನಿರ್ವಹಣೆಗೆ ತಾಲೂಕು ಮತ್ತು ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ತಕ್ಷಣ ನೇಮಿಸಲಾಗುವುದು. ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ಬಿಡುಗಡೆ ಮಾಡುವ ನೀರಿನ ಪ್ರಮಾಣ ಆಧರಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವರಿಗೆ ತಿಳಿಸಿದರು.
ಸೌಲಭ್ಯಕ್ಕೆ ಅನುಮತಿ ನೀಡಿ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರತಿ ಎರಡು ದಿನಕ್ಕೊಮ್ಮೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆ ನಡೆಸಬೇಕು. ಸಂಘ-ಸಂಸ್ಥೆಗಳು ಐಸೋಲೇಷನ್‌ಗಾಗಿ ಬೆಡ್ ವ್ಯವಸ್ಥೆ ಕಲ್ಪಿಸಲು ಮುಂದಾದರೆ ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡಬೇಕು ಎಂದು ಸಚಿವ ಅಂಗಡಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ. ದರ್ಶನ, ಎಸ್ಪಿ ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಡಾ.ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಜತೆಗೆ ದೊಡ್ಡ ಪರದೆಯ ಮೂಲಕ ಹಿರಿಯ ವೈದ್ಯರು ನಿಗಾ ವಹಿಸಬೇಕು. ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳಿಗೆ ರ‌್ಯಾಪಿಡ್ ಆಕ್ಸಿಜನ್ ಕಿಟ್ ನೀಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಸೋಂಕಿತರು ಕೊನೇ ಗಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿರುವುದರಿಂದ ಮರಣ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳು ಹಾಗೂ ಅಧಿಕ ಜನಸಾಂಧ್ರತೆ ಇರುವ ಕಡೆಗಳಲ್ಲಿ ತಪಾಸಣಾ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಮೂರು ತಿಂಗಳಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ, ನಂತರ ಸಾವಿನ ಸಂಖ್ಯೆ ಹೆಚ್ಚಾಗಿದೆ. ವಾರ್ಡ್ ಮಟ್ಟದಲ್ಲಿ ಸಮಿತಿ ರಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣಾ ಕಾರ್ಯ ಕೈಗೊಳ್ಳಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್.ಕೆ. ಅತೀಕ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ