

ಗೋಕಾಕ: ಮಹಾರಾಷ್ಟ್ರ ಮತ್ತು ಹಿಡಕಲ್ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಟಪ್ರಭಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ತಲೆದೋರುವ ಸಾಧ್ಯತೆ ಇದ್ದು, ಅಧಿಕಾರಿಗಳು ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೆಗೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಪ್ರವಾಹ ತಲೆದೋರಬಹುದಾದ ಗ್ರಾಮಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿದರು.
ಈಗಾಗಲೇ ಟಪ್ರಭಾ ನದಿಗೆ 51 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 62 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಟಪ್ರಭಾ ನದಿಗೆ ಹರಿದು ಬಂದರೆ ಲೋಳಸೂರ ಸೇತುವೆಯು ಜಲಾವತಗೊಳ್ಳಲಿದೆ. ಅಲ್ಲದೇ, ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಸುಮಾರು 28 ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತುರ್ತಾಗಿ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ನದಿ ತೀರದ 28 ಗ್ರಾಮಗಳಲ್ಲಿ ತಾಲೂಕು ಮಟ್ಟದ ಉಸ್ತುವಾರಿ ಅಧಿಕಾರಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ ಎಂದರು.
ಸಂತ್ರಸ್ತರು ತೊಂದರೆಗೆ ಸಿಲುಕದಂತೆ ಕೂಡಲೇ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಪಿಡಿಒ, ಗ್ರಾಮ ಆಡಳಿತಾಧಿಕಾರಿ ಮತ್ತು ಉಸ್ತುವಾರಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕರ್ತವ್ಯ ನಿರ್ವಹಿಸಬೇಕು. ಪ್ರವಾಹದಿಂದ ಹಾನಿಗೆ ಒಳಗಾಗುವ ರೈತರು ಮತ್ತು ಸಂತ್ರಸ್ತರಿಗೆ ಸೂಕ್ತ ಪರಿಹಾರ ಒಗಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಮರ್ಪಕ ವರದಿ ಸಲ್ಲಿಸಬೇಕು ಎಂದು ಎಚ್ಚರಿಸಿದರು.
ಗೋಕಾಕ ತಹಸೀಲ್ದಾರ ಮೋಹನ್ ಭಸ್ಮೆ, ಮೂಡಲಗಿ ತಹಸೀಲ್ದಾರ ಶ್ರೀಶೆಲ ಗುಡುಮೆ, ಮೂಡಲಗಿ ತಾ.ಪಂ. ಇಒ ಎ್.ಜಿ.ಚಿನ್ನನ್ನವರ, ಗೋಕಾಕ ತಾ.ಪಂ. ಇಒ ಪರಶುರಾಮ ಗಸ್ತಿ, ಡಿವೆಎಸ್ಪಿ ರವಿ ನಾಯಿಕ ಸೇರಿದಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಗೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ಲೋಳಸೂರ ಸೇತುವೆ ಬಳಿ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.