ಅತಿವೃಷ್ಟಿ ಹಾನಿಯ ವರದಿ ಸಭೆ

ಅತಿವೃಷ್ಟಿ ಹಾನಿಯ ವರದಿ ಸಭೆ
ಯಲಬುರ್ಗಾದ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಅತಿವೃಷ್ಟಿ ಹಾನಿಯ ಕುರಿತು ವರದಿ ಪಡೆಯುವ ಸಭೆ ತಹಸೀಲ್ದಾರ್ ವಿಠ್ಠಲ ಚೌಗಲೆ ಅಧ್ಯಕ್ಷತೆಯಲ್ಲಿ ನಡೆಯಿತು. ಕುಕನೂರು ತಹಸೀಲ್ದಾರ್ ನೀಲಪ್ರಭಾ, ತಾಪಂ ಇಒ ಸಂತೋಷ್ ಪಾಟೀಲ್ ಇದ್ದರು.
Published on

ಯಲಬುರ್ಗಾ: ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ಗ್ರಾಮಿಣ ಭಾಗದಲ್ಲಿ ಮನೆಗಳು ಕುಸಿದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಿದ್ದ ಮನೆಗಳ ವರದಿ ಸಲ್ಲಿಸಿ ಎಂದು ತಹಸೀಲ್ದಾರ್ ವಿಠ್ಠಲ ಚೌಗಲೆ ಹೇಳಿದರು.

ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಯಲಬುರ್ಗಾ-ಕುಕನೂರು ತಹಸೀಲ್ದಾರ್, ತಾಪಂ ಇಒಗಳ ನೇತೃತ್ವದಲ್ಲಿ ಗುರುವಾರ ನಡೆದ ಅತಿವೃಷ್ಟಿ ಹಾನಿಯ ಕುರಿತು ವರದಿ ಪಡೆಯುವ ಸಭೆಯಲ್ಲಿ ಮಾತನಾಡಿದರು.

ಮನೆಗಳು ಎಷ್ಟು ಪ್ರಮಾಣದಲ್ಲಿ ಹಾನಿಯಾಗಿವೆ ಎಂಬುದನ್ನು ಪರಿಶೀಲಿಸಿ ಫಲಾನುಭವಿಗಳಿಂದ ಅಗತ್ಯ ದಾಖಲೆ ಸಂಗ್ರಹಿಸಿ ವರದಿ ಸಲ್ಲಿಸಬೇಕು. ತೊಂಡಿಹಾಳ, ಬಂಡಿಹಾಳ ರಸ್ತೆಗಳಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್‌ಗಳ ಕಾಮಗಾರಿಯಿಂದ ಜನರಿಗೆ ತೊಂದರೆಯಾಗದಂತೆ ಸಂಬಂಧಿಸಿದ ಇಂಜಿನಿಯರ್‌ಗಳು ಕ್ರಮ ಕೈಗೊಳ್ಳಿ.

ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪಟ್ಟಿ ತಯಾರಿಸಿ ಪರಿಹಾರ ನೀಡಿ. ಜೆಸ್ಕಾಂನಿಂದ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದರು.

ತಾಪಂ ಇಒ ಸಂತೋಷ್ ಪಾಟೀಲ್ ಮಾತನಾಡಿ, ತಾಲೂಕಿನ ಅಂಗನವಾಡಿ, ಶಾಲಾ ಕಟ್ಟಡಗಳ ಸದೃಢತೆ ಬಗ್ಗೆ ಮಾಹಿತಿ ಪಡೆಯಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ಎಂದು ಬಿಇಒ ಪದ್ಮನಾಭ ಹಾಗೂ ಸಿಡಿಪಿಒ ಸಿಂಧುಗೆ ಸೂಚಿಸಿದರು.

ರೈತರ ಆಧಾರ್ ಜೋಡಣೆ ಮಾಡಿ ಕೃಷಿ ಇಲಾಖೆಯಲ್ಲಿ ಎಫ್‌ಐಡಿ ಮಾಡಿಸಿ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡಬೇಕು. ಯಲಬುರ್ಗಾ-ಕುಕನೂರು ತಾಲೂಕಿನಲ್ಲಿ ರಸ್ತೆಗಳು ಹಾಳಾಗಿದ್ದಲ್ಲಿ ತಕ್ಷಣವೇ ಪರಿಶೀಲಿಸಿ ತಹಸಿಲ್ ಕಚೇರಿಗೆ ವರದಿ ಸಲ್ಲಿಸಬೇಕು.

ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಈಗ ಮಕ್ಕಳಲ್ಲಿ ಕಣ್ಣಿನ ತೊಂದರೆಗಳು ಕಂಡುಬಂದಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.

ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಪಡಿಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರ ನೋಂದಣಿ ಪ್ರಕ್ರಿಯೆ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರದಲ್ಲಿ ಮಾತ್ರ ಅರ್ಜಿ ಹಾಕಬೇಕು ಎಂದರು.

ಕುಕನೂರು ತಹಸೀಲ್ದಾರ್ ನೀಲಪ್ರಭಾ, ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net