2.72 ಕೋಟಿ ರೂ. ನೆರೆ ಪರಿಹಾರ ವಿತರಣೆ

maheshwara rao new
Published on

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ 3682 ಗೃಹೋಪಯೋಗಿ ವಸ್ತುಗಳಿಗೆ, ಜಾನುವಾರು, ದನದ ಕೊಟ್ಟಿಗೆ, ಮನೆ ಸೇರಿ 5,136 ಹಾನಿ ಪ್ರಕರಣ ದಾಖಲಾಗಿದೆ. 2068 ಪ್ರಕರಣಗಳಲ್ಲಿ 2.72 ಕೋಟಿ ರೂ. ಪರಿಹಾರ ನೀಡಲಾಗಿದೆ. ಉಳಿದ ಪ್ರಕರಣಗಳಲ್ಲಿ ಶೀಘ್ರ ಪರಿಹಾರ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೋವಿಡ್-19 ಪ್ರಸ್ತುತ ಸ್ಥಿತಿ, ಪ್ರಕೃತಿ ವಿಕೋಪ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸರ್ಕಾರದ ಅಭಿವೃಧ್ದಿ ಕಾರ್ಯಗಳು ಸೇರಿದಂತೆ ಖಾಸಗಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಮರಳಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮಳೆ ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆ ಮರಳಿನ ಬ್ಲಾಕ್‌ಗಳನ್ನು ಗುರುತಿಸಿ, ನಿಯಮಾನುಸಾರ ಮರಳು ತೆಗೆಯಲು ಅನುಮತಿ ನೀಡಬೇಕೆಂದು ಸೂಚನೆ ನೀಡಿದರು.

ಶೇ.13ರಷ್ಟು ಸೋಂಕಿನ ಲಕ್ಷಣ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಳೆದ ಮಾರ್ಚ್‌ನಿಂದ ಜಿಲ್ಲಾಡಳಿತ ಸೇರಿದಂತೆ ಆರೋಗ್ಯ ಇಲಾಖೆ ಉತ್ತಮವಾಗಿ ಕಾರ‌್ಯನಿರ್ವಹಿಸುತ್ತಿದೆ. ಈವರೆಗೆ 1.57 ಲಕ್ಷಕ್ಕೂ ಹೆಚ್ಚು ಜನರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 20,830 ಕೋವಿಡ್ ಪ್ರಕರಣಗಳಾಗಿವೆ. ಶೇ. 90.80 ರಷ್ಟು ಗುಣಮುಖರಾಗಿದ್ದಾರೆ. ಇವುಗಳಲ್ಲಿ ಶೇ. 13ರಷ್ಟು ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಶೇ. 87ರಷ್ಟು ಯಾವುದೇ ರೋಗಲಕ್ಷಣಗಳು ಕಂಡು ಬಂದಿಲ್ಲ ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.

ಸೀರೋ ಸರ್ವೆಲೆನ್ಸ್ ಕಾರ್ಯ

ಆರೋಗ್ಯ ಇಲಾಖೆ ಸ್ಥಳೀಯ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ಸೀರೋ ಸರ್ವೆಲೆನ್ಸ್ ಕಾರ್ಯ ಹಮ್ಮಿಕೊಳ್ಳಬೇಕು. ಕೋವಿಡ್‌ನಿಂದ ಮರಣ ಹೊಂದಿರುವವರ ಕೋವಿಡ್ ತೀವ್ರತೆ ಅಥವಾ ಇನ್ನಿತರ ಕಾಯಿಲೆ ಬಗ್ಗೆ ವರದಿ ಇಟ್ಟುಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net