100 ವರ್ಷದ ಹಿಂದೆ ಬಂಟ್ವಾಳದ ಜನರ ನಿದ್ದೆಗೆಡಿಸಿತ್ತು ಮಹಾನೆರೆ

Bolla
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಬಂಟ್ವಾಳದ ಇತಿಹಾಸದಲ್ಲಿ 1923 ಸ್ಮರಣೀಯ ವರ್ಷ. ಬಂಟ್ವಾಳದ ಜನ ಪದೇಪದೆ ನೆನೆಪಿಸಿಕೊಳ್ಳುವ ವರ್ಷ. ಪವಾಡಗಳ ಮೂಲಕ ಜನಮಾನಸದಲ್ಲಿ ನೆಲೆ ನಿಂತಿರುವ, ಕಲಿಯುಗದ ಶ್ರೇಷ್ಠ ಸಂತ ಅವಧೂತ ಸದ್ಗುರು ಭಗವಾನ್ ಶ್ರೀ ನಿತ್ಯಾನಂದ ಸ್ವಾಮೀಜಿ ನೇತ್ರಾವತಿ ನದಿ ತಟದಲ್ಲಿರುವ ಬಂಟ್ವಾಳಕ್ಕೆ ಪಾದಸ್ಪರ್ಶ ಮಾಡಿದ ವರ್ಷ. ನೇತ್ರಾವತಿ ನದಿಯ ರೌದ್ರಾವತಾರಕ್ಕೆ ಬಂಟ್ವಾಳ ಮುಳುಗಡೆಯಾದ ವರ್ಷ. ಪ್ರಸ್ತುತ ಈ ಎರಡು ಘಟನೆಗಳಿಗೆ 100 ವರ್ಷ ಪೂರೈಸುತ್ತಿರುವುದು ವಿಶೇಷ.

ಭಗವಾನ್ ನಿತ್ಯಾನಂದ ಸ್ವಾಮೀಜಿ ಲೋಕಸಂಚಾರದ ವೇಳೆ 1923ರ ಆಗಸ್ಟ್ ತಿಂಗಳಲ್ಲಿ ಬಂಟ್ವಾಳಕ್ಕೆ ಮೊದಲ ಸಲ ಪಾದಸ್ಪರ್ಶ ಮಾಡಿ ನೇತ್ರಾವತಿ ನದಿ ತೀರ ಹಾಗೂ ಇಲ್ಲಿನ ನಿತ್ಯಾನಂದ ನಗರದಲ್ಲಿ ಧ್ಯಾನ ನಿರತರಾಗಿದ್ದರು ಎನ್ನುವ ಪ್ರತೀತಿ ಇದೆ. ಆ ಸಂದರ್ಭ ಭಗವಾನರು ಅನೇಕ ಪವಾಡ ಮಾಡಿದ್ದರು, ಕಷ್ಟ ಹೇಳಿಕೊಂಡು ಬರುತ್ತಿದ್ದ ಭಕ್ತರ ಸಂಕಷ್ಟ ನಿವಾರಿಸುತ್ತಿದ್ದರು. ಭಗವಾನ್ ಶ್ರೀ ನಿತ್ಯಾನಂದರು ಧ್ಯಾನದಲ್ಲಿದ್ದಾಗ ಒಂದಷ್ಟು ಮಂದಿ ಇವರಿಗೆ ಪೀಡಿಸುತ್ತಿದ್ದರೆಂಬ ವಿಚಾರವನ್ನು ರಮೇಶ್ ನಾಡಕರ್ಣಿ ಪ್ರಕಟಿಸಿದ ಭಗವಾನ್ ನಿತ್ಯಾನಂದ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ನೊಂದ ನಿತ್ಯಾನಂದರು ಗಂಗೆಯೇ ನಿಮ್ಮ ಪಾಪ ಶಮನ ಮಾಡಬೇಕು ಎಂದು ಉದ್ಗರಿಸಿದ್ದರು ಎಂಬ ವಿಚಾರ ಆ ಕೃತಿಯಲ್ಲಿದೆ. ಶ್ರೀಗಳ ಪ್ರಾರ್ಥನೆಯ ಕೆಲವೇ ಹೊತ್ತಿನಲ್ಲಿ ಮೋಡ ಕವಿದು ಧಾರಾಕಾರ ಮಳೆ, ಗಾಳಿಯಿಂದ ನೇತ್ರಾವತಿ ಉಕ್ಕಿ ಹರಿದಿತ್ತು. ಪರಿಣಾಮ ಬಂಟ್ವಾಳವೆಂಬ ಪುಟ್ಟ ಊರು ಮುಳುಗಡೆಯಾಗಿತ್ತು. ಪೇಟೆಯಲ್ಲಿದ್ದ ಅಂಗಡಿ, ಮನೆಗಳು, ಜಾನುವಾರು, ಪ್ರಾಣಿಗಳು, ಕೃಷಿ, ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಪರಿಣಾಮ ಬಂಟ್ವಾಳದ ಜನ ದಿಕ್ಕು ಕಾಣದೆ ಕಂಗಾಲಾಗಿದ್ದರು.

ಬಂಟ್ವಾಳವನ್ನು ಮುಳುಗಿಸಿದ್ದ 1923ರ ಬೊಲ್ಲ ಇಡೀ ಬಂಟ್ವಾಳವನ್ನೇ ಮುಳುಗಿಸಿದ ಈ ದಿಢೀರ್ ನೆರೆ 1923ರ ಆಗಸ್ಟ್ 7 ಮತ್ತು 8ರಂದು ಬಂದಿತ್ತು. ಆಗಸ್ಟ್ 7ರಂದು ಮಳೆ, ಗಾಳಿ ಆರಂಭವಾದರೆ 8ರಂದು ಬಂಟ್ವಾಳವನ್ನು ನೇತ್ರಾವತಿ ನದಿ ನೀರು ಆವರಿಸಿತ್ತು ಎಂದು ಆಗ ಪ್ರತ್ಯಕ್ಷ ಕಂಡಿದ್ದ ಹಿರಿಯರು ಈ ಹಿಂದಿನ ತಲೆಮಾರಿನ ಜನರಿಗೆ ತಿಳಿಸಿದ್ದರು. ಆ ಬಳಿಕ ಒಂದಷ್ಟು ಮಂದಿ ಆಗಿನ ಹಿರಿಯರು ಭಗವಾನ್ ನಿತ್ಯಾನಂದರ ಬಳಿ ತೆರಳಿದ್ದರು. ಆಗ ನಿತ್ಯಾನಂದರು ಮರವೊಂದರ ರೆಂಬೆಯಲ್ಲಿ ಧ್ಯಾನಸ್ಥರಾಗಿದ್ದರು. ಅವರು ನೀಡಿದ ಸಲಹೆಯಂತೆ ನೇತ್ರಾವತಿಗೆ ಕುಂಕುಮಾರ್ಚನೆಗೈದು ಪ್ರಾರ್ಥಿಸುತ್ತಿದ್ದಂತೆ ನೆರೆ ಇಳಿಮುಖವಾಯಿತು ಎಂಬ ವಿಚಾರ ರಮೇಶ್ ನಾಡಕರ್ಣಿಯವರ ಕೃತಿಯಲ್ಲಿದೆ. ಅನಂತರ 1974ರ ಜುಲೈ ತಿಂಗಳಲ್ಲಿ ಬಂಟ್ವಾಳ ನೆರೆಯಿಂದ ಮುಳುಗಿದ್ದು, ಇದು ಈಗಿನ ತಲೆಮಾರಿಗೆ ಸ್ಪಷ್ಟ ಅರಿವಿದೆ. ವಿಶೇಷವೆಂದರೆ 1974ರಲ್ಲಿ ಬಂದಿದ್ದ ನೆರೆಯ ಪ್ರಮಾಣಕ್ಕಿಂತ ಸುಮಾರು ಎರಡೂವರೆ ಅಡಿ ಹೆಚ್ಚು ನೆರೆ 1907ರಲ್ಲಿ ಬಂದಿತ್ತು.

ಶಿಲಾಕಲ್ಲಿನ ದಾಖಲೆ

ಈ ಬಗ್ಗೆ ಬಂಟ್ವಾಳ ಕಂದಾಯ ಇಲಾಖೆಯಲ್ಲಿ ದಾಖಲೆಗಳಿತ್ತು, ಈಗ ಅದು ಸಿಗುವುದು ಕಷ್ಟ. ಆದರೆ ಆಗ ಪಾಣೆಮಂಗಳೂರಿನಲ್ಲಿ ಜನತಾ ಹೋಟೆಲ್‌ವೊಂದು ಇತ್ತು. ಅದರ ಪಕ್ಕ ನೆರೆ ಬಂದ ಇಸವಿ, ದಿನಾಂಕ ಮತ್ತು ಗುರುತಿನ ಶಿಲಾಕಲ್ಲನ್ನು ಈಗಲೂ ಕಾಣಬಹುದು. 2023 ಆಗಸ್ಟ್ 7ಕ್ಕೆ ಅಂದಿನ ರುದ್ರ ಭಯಾನಕ ನೆರೆಗೆ ಶತಮಾನ ಪೂರೈಸುತ್ತದೆ. ಕಾಕತಾಳೀಯ ಎಂಬಂತೆ ಈಗ ಎರಡು, ಮೂರು ದಿನಗಳಿಂದ ಗಾಳಿ, ಮಳೆ ಬಿರುಸುಗೊಂಡಿದೆ. ನೇತ್ರಾವತಿ ನದಿ ಕೂಡ ಎರಡು ದಿನಗಳಿಂದ ಅಪಾಯದ ಕರೆಗಂಟೆ ಬಾರಿಸುತ್ತಿದೆ. ಅಲ್ಲಲ್ಲಿ ಹಾನಿಗಳೂ ನಡೆದಿವೆ. ಒಂದಷ್ಟು ಮಂದಿ 1923ರ ನೆರೆಯನ್ನು ನೆನಪಿಸುತ್ತಿದ್ದಾರೆ.

ಆ.6ರಂದು ಕಾರ್ಯಕ್ರಮದ ಚಿಂತನೆ

ಈ ನಡುವೆ ಬಂಟ್ವಾಳ ನಿತ್ಯಾನಂದ ನಗರದಲ್ಲಿರುವ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರದಲ್ಲಿ ಭಗವಾನ್ ನಿತ್ಯಾನಂದರು ಬಂಟ್ವಾಳಕ್ಕೆ ಪಾದಸ್ಪರ್ಶ ಮಾಡಿ ಶತಮಾನ ಪೂರೈಸುವ ಹಿನ್ನಲೆಯಲ್ಲಿ ಆಗಸ್ಟ್ 6ರಂದು ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ದಿನೇಶ್ ಭಂಡಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net